ಡೈಲಿವಾರ್ತೆ:13/ಏಪ್ರಿಲ್ /2026

ಸಚಿವ ಸ್ಥಾನ ಬೇಡಿಕೆ: ಕಾಂಗ್ರೆಸ್ ಹಿರಿಯ ಶಾಸಕರು ದೆಹಲಿಗೆ ದೌಡು, ಹೈಕಮಾಂಡ್ ಭೇಟಿಗೆ ಸಜ್ಜು

ನವದೆಹಲಿ, ಏಪ್ರಿಲ್ 13: ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನರ್‌ರಚನೆ ವಿಚಾರ ಮತ್ತೆ ತೀವ್ರಗೊಂಡಿದ್ದು, ಹಿರಿಯ ಶಾಸಕರ ಗುಂಪೊಂದು ಮಂತ್ರಿಗಿರಿ ಬೇಡಿಕೆಯನ್ನು ಮುಂದಿಟ್ಟು ದೆಹಲಿಗೆ ಭೇಟಿ ನೀಡಿದೆ. ನಾಯಕತ್ವದ ಗೊಂದಲ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆಯೇ ಈ ದೆಹಲಿ ದಾಳಿ ಗಮನ ಸೆಳೆಯುತ್ತಿದೆ.
ನಿನ್ನೆ ರಾತ್ರಿ ಸುಮಾರು 16ಕ್ಕೂ ಹೆಚ್ಚು ಹಿರಿಯ ಶಾಸಕರು ದೆಹಲಿಗೆ ಆಗಮಿಸಿದ್ದು, ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಯಶವಂತರಾಯಗೌಡ ಪಾಟೀಲ್, ಕೆ. ಷಡಾಕ್ಷರಿ, ಟಿ.ಬಿ. ಜಯಚಂದ್ರ, ಅಶೋಕ್ ಪಟ್ಟಣ್, ನಾರಾಯಣಸ್ವಾಮಿ, ರಾಘವೇಂದ್ರ ಹಿಟ್ನಾಳ್, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವು ಪ್ರಮುಖರು ಈ ತಂಡದಲ್ಲಿದ್ದಾರೆ.

ಇಂದು ಸಂಜೆ 6 ಗಂಟೆಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಸಮಯ ನಿಗದಿಯಾಗಿದ್ದು, ಬಳಿಕ ಏಪ್ರಿಲ್ 14ರಂದು ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.

“ಬಂಡಾಯ ಅಲ್ಲ, ಅವಕಾಶದ ಬೇಡಿಕೆ”

ದೆಹಲಿಯಲ್ಲಿ ಮಾತನಾಡಿದ ಶಾಸಕ ಎ.ಆರ್. ಕೃಷ್ಣಮೂರ್ತಿ, ಇದು ಯಾವ ರೀತಿಯ ಬಂಡಾಯವಲ್ಲ. ಸಚಿವ ಸ್ಥಾನ ನೀಡುವ ನಿರ್ಧಾರ ಹೈಕಮಾಂಡ್‌ಗೇ ಸೇರಿದ್ದು. ಆದರೆ ನಮ್ಮ ಮಾತು ಕೇಳಬೇಕು. 2.5 ವರ್ಷಗಳ ನಂತರ ಸಂಪುಟ ಪುನರ್‌ರಚನೆ ಮಾಡುವ ಭರವಸೆ ನೀಡಲಾಗಿತ್ತು. ಅನುಭವಿಗಳಾದ ಹಲವರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಅದನ್ನು ನೆನಪಿಸಲು ಬಂದಿದ್ದೇವೆ ಎಂದರು.
ಸಂಪುಟದಿಂದ ಯಾರನ್ನು ಕೈಬಿಡಬೇಕು, ಯಾರನ್ನು ಸೇರಿಸಬೇಕು ಎಂಬುದು ಹೈಕಮಾಂಡ್ ನಿರ್ಧಾರವಾಗಿದ್ದು ಒಟ್ಟಿನಲ್ಲಿ ಸಂಪುಟ ಪುನರ್‌ರಚನೆ ಆಗಬೇಕು” ಎಂಬುದು ನಮ್ಮ ಆಶಯ ಎಂದು ಅವರು ಹೇಳಿದರು.

ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ:
ಶಾಸಕ ನಾರಾಯಣಸ್ವಾಮಿ ಮಾತನಾಡಿ, “ಈಗಾಗಲೇ 25ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಬಂದಿದ್ದು, ಇನ್ನೂ ಕೆಲವರು ಬರಲಿದ್ದಾರೆ. ಅಂಬೇಡ್ಕರ್ ಜಯಂತಿ ಬಳಿಕ ಸಂಖ್ಯೆ ಹೆಚ್ಚಾಗಲಿದೆ. ಹಿಂದೆ ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆ, ಜಾತಿ ಮತ್ತು ಅರ್ಹತೆ ಆಧಾರದ ಮೇಲೆ ಯಾರನ್ನಾದರೂ ಆಯ್ಕೆ ಮಾಡುವ ಸ್ವಾತಂತ್ರ್ಯ ಹೈಕಮಾಂಡ್‌ಗೆ ಇದೆ ಎಂದು ಹೇಳಿದ ಅವರು, ಹೊಸಬರಿಗೂ ಅವಕಾಶ ಸಿಗಬೇಕು. ಒಂದೇ ಕುಟುಂಬದ ಇಬ್ಬರಿಗೆ ಸಚಿವ ಸ್ಥಾನ ನೀಡಿರುವ ಉದಾಹರಣೆಗಳಿವೆ. ನಮಗೆ ಅವಕಾಶ ಯಾವಾಗ?” ಎಂದು ಪ್ರಶ್ನಿಸಿದರು.

ನಾಯಕತ್ವ ಬದಲಾವಣೆ? ಸ್ಪಷ್ಟನೆ:
ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು ಹೈಕಮಾಂಡ್ ಇದುವರೆಗೆ ಅಂತಹ ಯಾವುದೇ ಸೂಚನೆ ನೀಡಿಲ್ಲ. ನಾವು ನಾಯಕತ್ವ ಬದಲಾವಣೆ ಕುರಿತು ಚರ್ಚೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿಮುಂದಿನ ಒಂದು ತಿಂಗಳೊಳಗೆ ಸಚಿವ ಸಂಪುಟ ಪುನರ್‌ರಚನೆ ಆಗಬೇಕು ಎಂಬ ಒತ್ತಡವನ್ನು ಹಿರಿಯ ಶಾಸಕರು ಹೈಕಮಾಂಡ್ ಮುಂದೆ ಇಡಲಿದ್ದಾರೆ.