



ಡೈಲಿವಾರ್ತೆ:13/ಏಪ್ರಿಲ್ /2026

ಕುಂದಾಪುರ: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಗರಡಿ ಮನೆಗೆ ಬೀಗ – ವೃದ್ಧೆಯ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ಜಾಗದ ವಿಚಾರವಾಗಿ ನ್ಯಾಯಾಲಯವು ನೀಡಿದ ತೀರ್ಪಿನ ಬೆನ್ನಲ್ಲೇ, ವಿವಾದಿತ ಗರಡಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಬೀಗ ಹಾಕಿ, ಪ್ರಶ್ನಿಸಿದ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಬಸ್ರೂರು ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಬಸ್ರೂರು ಗ್ರಾಮದ ಕೇಶವ ಪೂಜಾರಿ (46) ಮತ್ತು ಅವರ ತಾಯಿ ಗಿರಿಜಾ ಪೂಜಾರ್ತಿ ಎಂಬುವವರಿಗೆ ಸೇರಿದ ಜಾಗ ಹಾಗೂ ಗರಡಿ ಮನೆಯ ವಿಚಾರದಲ್ಲಿ ಸ್ಥಳೀಯರಾದ ಅಶೋಕ ಪೂಜಾರಿ, ವಿನೋದ ಪೂಜಾರ್ತಿ, ಸೋಮ ಪೂಜಾರಿ ಮತ್ತು ರಾಘು ಪೂಜಾರಿ ಎಂಬುವವರ ನಡುವೆ ದೀರ್ಘಕಾಲದಿಂದ ನ್ಯಾಯಾಲಯದಲ್ಲಿ ವ್ಯಾಜ್ಯವಿತ್ತು.
ದಿನಾಂಕ 18/03/2026 ರಂದು ಮಾನ್ಯ ನ್ಯಾಯಾಲಯವು ಸದರಿ ಜಾಗವು ಪಿರ್ಯಾದಿದಾರರ ತಾಯಿ ಗಿರಿಜಾ ಪೂಜಾರ್ತಿ ಅವರಿಗೆ ಸೇರಿದ್ದೆಂದು ಆದೇಶ ಹೊರಡಿಸಿತ್ತು. ಆದರೆ, ಈ ಆದೇಶವನ್ನು ಲೆಕ್ಕಿಸದ ಆರೋಪಿಗಳು ಏಪ್ರಿಲ್ 12ರಂದು ಗಿರಿಜಾ ಅವರ ಜಾಗದಲ್ಲಿರುವ ಗರಡಿ ಮನೆಗೆ ಅನುಮತಿ ಇಲ್ಲದೆ ಪ್ರವೇಶಿಸಿ, ಅದಕ್ಕೆ ಬೀಗ ಜಡಿದಿದ್ದಾರೆ ಎನ್ನಲಾಗಿದೆ.
ಹಲ್ಲೆ ಮತ್ತು ಬೆದರಿಕೆ:
ಭಾನುವಾರ ಬೆಳಿಗ್ಗೆ 10:15 ರ ಸುಮಾರಿಗೆ ಪಿರ್ಯಾದಿದಾರ ಕೇಶವ ಪೂಜಾರಿ ಮತ್ತು ಅವರ ತಾಯಿ ಗಿರಿಜಾ ಅವರು ಘಟನೆಯ ಬಗ್ಗೆ ವಿಚಾರಿಸಲು ಹೋದಾಗ, ಆರೋಪಿಗಳು ಏಕಾಏಕಿ ವಾಗ್ವಾದಕ್ಕಿಳಿದಿದ್ದಾರೆ. “ಗರಡಿ ನಮ್ಮದು, ನೀವೇನು ಕೇಳುವುದು?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಆರೋಪಿ ಅಶೋಕ ಪೂಜಾರಿಯು ವೃದ್ಧೆ ಗಿರಿಜಾ ಅವರನ್ನು ಬಲವಂತವಾಗಿ ಎಳೆದು ದೂಡಿದ್ದಾನೆ. ಇದರಿಂದ ಗಿರಿಜಾ ಅವರು ನೆಲಕ್ಕೆ ಬಿದ್ದು ಸೊಂಟಕ್ಕೆ ಬಲವಾದ ಒಳಪೆಟ್ಟು ಬಿದ್ದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಸ್ಥಳಕ್ಕೆ ಧಾವಿಸಿದ ಪಿರ್ಯಾದಿದಾರರ ಅಣ್ಣ ರಾಜು ಪೂಜಾರಿ, ಅತ್ತಿಗೆ ಸುಗುಣ ಮತ್ತು ತಂಗಿ ಆಶಾ ಅವರನ್ನು ಕಂಡು ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕೇಶವ ಪೂಜಾರಿ ಅವರು ನೀಡಿದ ದೂರಿನ ಮೇರೆಗೆ, ಕುಂದಾಪುರ ಗ್ರಾಮಾಂತರ ಪೊಲೀಸರು ಆರೋಪಿಗಳಾದ ಅಶೋಕ, ವಿನೋದ, ಸೋಮ ಮತ್ತು ರಾಘು ಪೂಜಾರಿ ವಿರುದ್ಧ ಅಪರಾಧ ಕ್ರಮಾಂಕ 19/2026 ರಂತೆ ಹೊಸ ಭಾರತೀಯ ನ್ಯಾಯ ಸಂಹಿತೆಯ 329(3), 115(2), 352, 351(2) ಮತ್ತು 3(5) BNS. ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.