ಡೈಲಿವಾರ್ತೆ:18/ಏಪ್ರಿಲ್ /2026

​ಸಾಸ್ತಾನ: ಶ್ರೀ ಕಂಬಿಗಾರ ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಸಂಭ್ರಮದ ‘ಸಿರಿ ಸಿಂಗಾರ ನೇಮೋತ್ಸವ’ ಕ್ಕೆ ಚಾಲನೆ: ದೈವಾರಾಧನೆಯು ಬದುಕಿಗೆ ಶಿಸ್ತು ಕಲಿಸುವ ವಿಶ್ವವಿದ್ಯಾಲಯ: ರಘುರಾಜ್ ಕದ್ರಿ

​ಕೋಟ: ತುಳುನಾಡಿನ ದೈವಾರಾಧನೆಯು ಕೇವಲ ಆಚರಣೆಯಲ್ಲ, ಅದು ಬದುಕಿಗೆ ಶಿಸ್ತು, ಸಹಬಾಳ್ವೆ ಮತ್ತು ನ್ಯಾಯವನ್ನು ಬೋಧಿಸುವ ಮಹಾನ್ ವಿಶ್ವವಿದ್ಯಾಲಯವಿದ್ದಂತೆ. ಅಧರ್ಮ ಹೆಚ್ಚಾದಾಗ ಸತ್ಯದ ರಕ್ಷಣೆಗಾಗಿ ಉದ್ಭವಗೊಂಡ ಶಕ್ತಿಯೇ ದೈವಾರಾಧನೆ ಎಂದು ಮಂಗಳೂರಿನ ಗೋಕರ್ಣನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಘುರಾಜ್ ಕದ್ರಿ ನುಡಿದರು.
ಅವರು ​ಬ್ರಹ್ಮಾವರ ತಾಲೂಕಿನ ಗುಂಡ್ಮಿ-ಸಾಸ್ತಾನದ ಶ್ರೀ ಕಂಬಿಗಾರ, ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸನ್ನಿಧಾನದಲ್ಲಿ 54 ವರ್ಷಗಳ ದೀರ್ಘ ಕಾಲದ ಬಳಿಕ ಜರುಗಿದ ‘ಸಿರಿ ಸಿಂಗಾರ ನೇಮೋತ್ಸವ’ದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

​ಮಾನವೀಯತೆಯೇ ದೈವಾರಾಧನೆಯ ಮೂಲ:
ಬಬ್ಬುಸ್ವಾಮಿಯ ಕಾರ್ಣಿಕವನ್ನು ಸ್ಮರಿಸಿದ ಅವರು, ದೈವಗಳು ಜಾತಿ ಆಧಾರಿತವಾಗಿ ಹೋಗಿಲ್ಲ, ನೀತಿಯ ಆಧಾರದ ಮೇಲೆ ಸಮಾಜ ಮುನ್ನಡೆಸಿವೆ. ಅಸ್ಪೃಶ್ಯತೆ ನಿವಾರಣೆಗೆ ಈ ದೈವಸ್ಥಾನಗಳೇ ಮೂಲ ಪ್ರೇರಣೆ. ನೇಮೋತ್ಸವದಲ್ಲಿ ಬಳಸುವ ಪ್ರತಿಯೊಂದು ವಸ್ತುವು ಪ್ರಕೃತಿಯ ಆರಾಧನೆಯನ್ನು ಎತ್ತಿ ತೋರಿಸುತ್ತದೆ. ವ್ಯಕ್ತಿಯ ಪರಿಶುದ್ಧತೆಯೇ ಧರ್ಮದ ಮೂಲ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಶ್ರೀ ಯು.ಟಿ. ಖಾದರ್ ಅವರ ಶುಭ ಸಂದೇಶವನ್ನು ವಾಚಿಸಲಾಯಿತು.
ಅವರ ಆಪ್ತ ಸಹಾಯಕ ಪ್ರವೀಣ್ ಕುಮಾರ್ ಉಳ್ಳಾಲ್ ಅವರ ಮೂಲಕ ಶುಭ ಹಾರೈಸಿದರು.

​ಸಾಂಘಿಕ ಶಕ್ತಿಯಿಂದ ಅಭಿವೃದ್ಧಿ ಸಾಧ್ಯ: ಉದಯ ಶೆಟ್ಟಿ

ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ದೇಗುಲದ ಆಡಳಿತ ಮುಕ್ತೇಸರ ಶ್ರೀ ಉದಯ ಶೆಟ್ಟಿ, ಕ್ಷೇತ್ರದ ಅಭಿವೃದ್ಧಿಗೆ ಭಕ್ತರ ಸಾಂಘಿಕ ಶಕ್ತಿಯು ಮಳೆಯಂತೆ ಸುರಿಯಬೇಕು. ಬಾಲ್ಯದಲ್ಲಿ ತಂದೆಯೊಂದಿಗೆ ಇಲ್ಲಿಗೆ ಬರುತ್ತಿದ್ದ ನೆನಪುಗಳು ಹಸಿರಾಗಿವೆ. ಕಲ್ಲಿನ ರೂಪದಲ್ಲಿದ್ದ ಆರಾಧನಾ ಕೇಂದ್ರಕ್ಕೆ ಇಂದು ಸುಭದ್ರವಾದ ನೆಲೆ ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರೆ ನೀಡಿದರು.

​ಪಕ್ಷಾತೀತ ಹೋರಾಟದ ಭರವಸೆ: ಬಿ. ಕೇಶವ ಕುಂದರ್

ಸಭೆಯ ಅಧ್ಯಕ್ಷತೆ ವಹಿಸಿದ್ದ ನೇಮೋತ್ಸವ ಸಮಿತಿ ಅಧ್ಯಕ್ಷ ಶ್ರೀ ಬಿ. ಕೇಶವ ಕುಂದರ್ ಮಾತನಾಡಿ ಕ್ಷೇತ್ರದಲ್ಲಿ ಭವ್ಯವಾದ ಗರ್ಭಗುಡಿ ನಿರ್ಮಾಣವಾಗುವುದು ಭಕ್ತರ ಆಶಯ. ಜಾಗದ ವಿಚಾರದಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ನಾವೆಲ್ಲರೂ ಪಕ್ಷಾತೀತವಾಗಿ ಒಂದಾಗಬೇಕಿದೆ. ಶಾಲಾ ಮೈದಾನದ ಜಾಗದಲ್ಲಿ ದೈವಸ್ಥಾನಕ್ಕೆ ಅಲ್ಪ ಪಾಲು ನೀಡುವುದರಿಂದ ಯಾರಿಗೂ ತೊಂದರೆಯಾಗದು. ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನ ಮುಂದುವರಿಸಲಾಗುವುದು ಎಂದರು. ಏಪ್ರಿಲ್ 19ರ ವರೆಗೆ ನಡೆಯುವ ನೇಮೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಕರೆ ನೀಡಿದರು.

​ಸಾಧಕರಿಗೆ ಗೌರವಾರ್ಪಣೆ:

ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀ ಇಬ್ರಾಹಿಂ ಸಾಹೇಬ್, ಶ್ರೀ ಜೋಸೆಫ್ ಡಿಸೋಜ, ಶ್ರೀ ಚಂದ್ರಯ ಆಚಾರ್ಯ, ಡಾ. ಸವಿತಾ ಪರಗ್, ಶ್ರೀ ಕೊರಗ ಪೂಜಾರಿ, ಶ್ರೀ ಮಂಜುನಾಥ ಭಂಡಾರಿ, ಶ್ರೀ ಚಂದ್ರಶೇಖರ್, ಶ್ರೀ ನವೀನ್ ಪಡ್ರೆ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು. ಮಲೇಷಿಯಾದಲ್ಲಿ ಚಿನ್ನ ಗೆದ್ದ ಅಂತರಾಷ್ಟ್ರೀಯ ಪಂಜಾ ಕುಸ್ತಿಪಟು ಶ್ರೀ ಸುರೇಶ್ ಬಿ. ಅವರಿಗೆ ವಿಶೇಷ ಗೌರವ ಸಲ್ಲಿಕೆಯಾಯಿತು.

ವೇದಿಕೆಯಲ್ಲಿ ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಶಂಕರ್ ಕುಂದರ್, ಪ್ರತಾಪ್ ಶೆಟ್ಟಿ, ಸುಭಾಷ್ ಶೆಟ್ಟಿ ಗಿಳಿಯಾರು, ಪ್ರವೀಣ್ ಕುಮಾರ್ ಜೆ.ಪಿ., ಡಾ. ವಿದ್ವಾನ್ ವಿಜಯ ಮಂಜರ್, ಬಿ. ಭುಜಂಗ ಶೆಟ್ಟಿ, ಜ್ಯೋತಿ ಉದಯಕುಮಾರ್, ಸುಲತಾ ಹೆಗ್ಡೆ, ಗಿರಿಜ ಮುಂತಾದವರು ಉಪಸ್ಥಿತರಿದ್ದರು.

​ನೇಮೋತ್ಸವ ಸಮಿತಿಯ ಜೊತೆ ಕಾರ್ಯದರ್ಶಿ ಕೃಷ್ಣ ಆಚಾರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸತೀಶ್ ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ, ರಾಜೇಶ್ ಆಚಾರ್ ಕೂರಾಡಿ ಕಾರ್ಯಕ್ರಮ ಆಯೋಜಿಸಿದ್ದರು. ಪ್ರಭಾಕರ್ ಮಣೂರು ವಂದಿಸಿದರು.