ಡೈಲಿವಾರ್ತೆ:18/ಏಪ್ರಿಲ್ /2026

ಸಾಲದ ಹಣಕ್ಕಾಗಿ ತಂಗಿ-ಮೈದುನನ ಅಪಹರಣ: ಅಕ್ಕ, ಭಾವ ಸೇರಿ ಮೂವರ ಬಂಧನ

​ಬೆಂಗಳೂರು: ಸಾಲದ ಹಣ ವಾಪಸ್ ನೀಡದ ಹಿನ್ನೆಲೆಯಲ್ಲಿ ಸ್ವಂತ ತಂಗಿ ಮತ್ತು ಮೈದುನನನ್ನೇ ಅಪಹರಿಸಿ, ಹಲ್ಲೆ ನಡೆಸಿದ ಆರೋಪದಡಿ ಅಕ್ಕ, ಭಾವ ಸೇರಿದಂತೆ ಮೂವರು ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.

​ದೂರುದಾರ ಮಹಿಳೆ ಪೃಥ್ವಿ ಅವರ ಸಹೋದರಿ ಪ್ರಫುಲ್ಲಾ, ಭಾವ ಸಲೀಂ ಶೇಕ್ ಮತ್ತು ಈತನ ಸಹಚರ ಬೀರೇಶ್ ಬಂಧಿತ ಆರೋಪಿಗಳು. ಸಾಲದ ವಿಚಾರವಾಗಿ ಉಂಟಾದ ವಿವಾದ ಈ ಭೀಕರ ಕೃತ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

​ಘಟನೆಯ ಹಿನ್ನೆಲೆ:
​ದೂರುದಾರರಾದ ಪೃಥ್ವಿ ಮತ್ತು ಅವರ ಪತಿ ಅಭಿಜಿತ್ ಹೆಬ್ಬಗೋಡಿಯ ಅನಂತನಗರದಲ್ಲಿ ವಾಸವಾಗಿದ್ದಾರೆ. ಇವರು ತಮ್ಮ ಅಕ್ಕ ಪ್ರಫುಲ್ಲಾ ಬಳಿ 9.50 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಪೈಕಿ 5 ಲಕ್ಷ ರೂಪಾಯಿಯನ್ನು ಈಗಾಗಲೇ ಮರುಪಾವತಿಸಲಾಗಿದ್ದು, ಬಾಕಿ ಹಣಕ್ಕಾಗಿ ಜೂನ್ ತಿಂಗಳವರೆಗೆ ಕಾಲಾವಕಾಶ ಪಡೆದಿದ್ದರು ಎನ್ನಲಾಗಿದೆ. ಆದರೆ, ಏಪ್ರಿಲ್ 14ರ ರಾತ್ರಿ ದಂಪತಿಯ ಮನೆಗೆ ನುಗ್ಗಿದ ಆರೋಪಿಗಳು, ಹಣಕಾಸಿನ ವ್ಯವಹಾರದ ಬಗ್ಗೆ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ನಂಬಿಸಿ ಬಲವಂತವಾಗಿ ಕಾರಿನಲ್ಲಿ ಕೂರಿಸಿ ಅಪಹರಿಸಿದ್ದಾರೆ.

​ಅಪಹರಣದ ವೇಳೆ ಮಾರ್ಗಮಧ್ಯೆ ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ ಅಭಿಜಿತ್ ಅವರ ಎದೆಭಾಗಕ್ಕೆ ಆರೋಪಿಗಳು ಕಾರಿನ ಕೀಲಿಯಿಂದ ಚುಚ್ಚಿ ಗಾಯಗೊಳಿಸಿದ್ದಾರೆ. ಬಳಿಕ ಅವರನ್ನು ನಾಗರಭಾವಿಯ ಮನೆಯೊಂದಕ್ಕೆ ಕರೆದೊಯ್ದು ಗೃಹಬಂಧನದಲ್ಲಿ ಇರಿಸಿದ್ದರು. ದಂಪತಿಯ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು ದೂರು ನೀಡಿದರೆ ಜೀವ ಸಮೇತ ಬಿಡುವುದಿಲ್ಲ ನಮ್ಮ ಹುಡುಗರಿಗೆ 500 ರೂಪಾಯಿ ಕೊಟ್ಟರೆ ನಿಮ್ಮನ್ನು ಸಾಯಿಸುತ್ತಾರೆ ಎಂದು ಪ್ರಾಣ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

​ಅಭಿಜಿತ್ ಅವರ ಮೊಬೈಲ್ ಸ್ವಿಚ್ ಆಫ್ ಬಂದಿದ್ದರಿಂದ ಅನುಮಾನಗೊಂಡ ಅವರ ಸಹೋದರಿ ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಗಾಂಭೀರ್ಯ ಅರಿತ ಪೊಲೀಸರು ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದಾಗ, ದಂಪತಿ ನಾಗರಭಾವಿಯ ಮನೆಯಲ್ಲಿರುವುದು ಪತ್ತೆಯಾಗಿದೆ. ತಕ್ಷಣ ದಾಳಿ ನಡೆಸಿದ ಪೊಲೀಸರು ಸಂತ್ರಸ್ತರನ್ನು ರಕ್ಷಿಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
​ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಮೊದಲು ‘ಝೀರೋ ಎಫ್‌ಐಆರ್’ ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಲಾಗಿದ್ದು, ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.