



ಡೈಲಿವಾರ್ತೆ:18/ಏಪ್ರಿಲ್ /2026

ಹುಟ್ಟುಹಬ್ಬದ ಪಾರ್ಟಿಯಲ್ಲಿ ದುರಂತ: ಚಿಕನ್ ಮೂಳೆ ಗಂಟಲಲ್ಲಿ ಸಿಲುಕಿ ಯುವಕನ ಸಾವು

ಶಿವಮೊಗ್ಗ: ಜಿಲ್ಲೆಯ ಕುಂಸಿ ಸಮೀಪದ ಚೆನ್ನಹಳ್ಳಿ ಗ್ರಾಮದಲ್ಲಿ ನಡೆದ ಹುಟ್ಟುಹಬ್ಬದ ಸಂಭ್ರಮವೊಂದು ಶೋಕತಪ್ತ ಅಂತ್ಯ ಕಂಡಿದೆ. ಪಾರ್ಟಿಯಲ್ಲಿ ಊಟ ಮಾಡುವಾಗ ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿಕೊಂಡ ಪರಿಣಾಮ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಮೃತ ಯುವಕನನ್ನು ಚೆನ್ನಹಳ್ಳಿ ಗ್ರಾಮದ ಸಚಿನ್ (21) ಎಂದು ಗುರುತಿಸಲಾಗಿದೆ.
ಏಪ್ರಿಲ್ 17ರ ಗುರುವಾರ ರಾತ್ರಿ ಗ್ರಾಮಸ್ಥರೊಬ್ಬರ ಹುಟ್ಟುಹಬ್ಬದ ಅಂಗವಾಗಿ ಗ್ರಾಮದ ಹೊರವಲಯದ ನಿರ್ಮಾಣ ಹಂತದ ಮನೆಯೊಂದರ ಬಳಿ ಮಾಂಸಾಹಾರಿ ಊಟದ ಕೂಟವನ್ನು ಏರ್ಪಡಿಸಲಾಗಿತ್ತು. ಸಚಿನ್ ಕೂಡ ಈ ಪಾರ್ಟಿಯಲ್ಲಿ ಭಾಗವಹಿಸಿದ್ದನು.
ಊಟ ಮುಗಿಸಿದ ನಂತರ ಸಚಿನ್ ಪಕ್ಕದಲ್ಲೇ ಇದ್ದ ನಿರ್ಮಾಣ ಹಂತದ ಕಟ್ಟಡದೊಳಗೆ ತೆರಳಿದ್ದನು. ಉಳಿದವರೆಲ್ಲರೂ ಪಾರ್ಟಿ ಮುಗಿಸಿ ಮನೆಗೆ ವಾಪಸ್ಸಾಗಿದ್ದರು. ಆದರೆ ಶುಕ್ರವಾರ (ಏ.18) ಮುಂಜಾನೆ ಕೆಲಸಗಾರರು ಕಟ್ಟಡದ ಕಾಮಗಾರಿಗಾಗಿ ಬಂದಾಗ ಸಚಿನ್ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ. ಕೂಡಲೇ ಕುಟುಂಬಸ್ಥರು ಸ್ಥಳಕ್ಕಾಗಮಿಸಿ ಆತನನ್ನು ಶಿವಮೊಗ್ಗಕ್ಕೆ ಕೊಂಡೊಯ್ದಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕುಂಸಿ ಠಾಣೆಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಮೃತ ಸಚಿನ್ ಮದ್ಯಪಾನ ಮಾಡಿದ್ದರಿಂದ, ಊಟ ಮಾಡುವಾಗ ಅಜಾಗರೂಕತೆಯಿಂದ ಗಂಟಲಿನಲ್ಲಿ ಆಹಾರದ (ಚಿಕನ್ ಮೂಳೆ) ತುಣುಕು ಸಿಲುಕಿಕೊಂಡಿದೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
ಸದ್ಯ ಈ ಘಟನೆ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.