



ಡೈಲಿವಾರ್ತೆ:18/ಏಪ್ರಿಲ್ /2026

ಮಣಿಪಾಲ: 33 ಕೋಟಿ ರೂ. ವಂಚನೆ – ಸಿಂಗಾಪುರ ಕಂಪನಿ ಸಿಇಓ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲು

ಮಣಿಪಾಲ: ಸಾಫ್ಟ್‌ವೇರ್ ಉತ್ಪನ್ನವೊಂದನ್ನು ಖರೀದಿಸುವ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಸಿಂಗಾಪುರದ ಕಂಪನಿಯೊಂದರ ಸಿಇಓ ಸೇರಿದಂತೆ ಐವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಶಿವಳ್ಳಿ ಗ್ರಾಮದ ನಿವಾಸಿ ದೀಲಿಪ್ ಆರ್. ಅಡಿಗ (35) ಎಂಬವರು ಲಕ್ಷ್ಮೀಂದ್ರ ನಗರದಲ್ಲಿ ‘ಎಮ್.ಎನ್. ಶೆಟ್ಟಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಇವರ ಕಂಪನಿಯಲ್ಲಿ ತಯಾರಾಗುವ ‘ಸಿಎಂಎಸ್ ಪ್ರಾಡಕ್ಟ್’ (CMS Product) ಅನ್ನು ಖರೀದಿಸಲು ಆಸಕ್ತಿ ಇರುವುದಾಗಿ ಸಿಂಗಾಪುರದ ‘ಇನ್ಫೋಮೋ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್’ (Infomo Global Pvt Ltd) ಕಂಪನಿಯ ಸಿಇಓ ಆನಂದರಾವ್ ಎಂಬವರು ಸಂಪರ್ಕಿಸಿದ್ದರು.
2019ರ ಅಕ್ಟೋಬರ್‌ನಲ್ಲಿ ನಡೆದ ಮಾತುಕತೆ ವೇಳೆ, ಈ ಸಾಫ್ಟ್‌ವೇರ್ ಉತ್ಪನ್ನಕ್ಕೆ ಪ್ರತಿಯಾಗಿ 35 ಲಕ್ಷ ರೂ. ನಗದು ಮತ್ತು ತಮ್ಮ ಕಂಪನಿಯ 17.5 ಲಕ್ಷ ಶೇರ್‌ಗಳನ್ನು ನೀಡುವುದಾಗಿ ಆನಂದರಾವ್ ಭರವಸೆ ನೀಡಿದ್ದರು. ಅಲ್ಲದೆ, ಈ ಶೇರ್‌ಗಳ ಮೌಲ್ಯ ಮೂರು ವರ್ಷಗಳ ಬಳಿಕ 33 ಕೋಟಿ ರೂ. ಆಗಲಿದೆ ಎಂದು ನಂಬಿಸಿದ್ದರು. ಕಂಪನಿಯ ಒಟ್ಟು ಶೇರ್ ಮೌಲ್ಯ 9 ಸಾವಿರ ಕೋಟಿ ರೂ. ತಲುಪಲಿದೆ ಎಂಬ ಸುಳ್ಳು ಮಾಹಿತಿಯನ್ನೂ ನೀಡಿದ್ದರು ಎನ್ನಲಾಗಿದೆ.
ಆರೋಪಿಗಳು ನೀಡಿದ ಸುಳ್ಳು ಮಾಹಿತಿಯನ್ನು ನಂಬಿದ ದೀಲಿಪ್ ಅಡಿಗ ಅವರು 2020ರ ಏಪ್ರಿಲ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಪ್ಪಂದದಂತೆ ದೀಲಿಪ್ ಅಡಿಗ ಅವರು ತಮ್ಮ ಕಂಪನಿಯ ಪ್ರಾಡಕ್ಟ್ ಅನ್ನು ಅವರಿಗೆ ಹಸ್ತಾಂತರಿಸಿದ್ದರು. ಆದರೆ, 2023ರಲ್ಲಿ ಒಪ್ಪಂದದ ಅವಧಿ ಮುಗಿದ ನಂತರ ದೀಲಿಪ್ ಅವರು ವ್ಯಾಲ್ಯೂಯೇಶನ್ ವರದಿ ಕೇಳಿದಾಗ ಆರೋಪಿಗಳು ಸರಿಯಾದ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಫೋನ್ ಮೂಲಕ ಸಂಪರ್ಕಿಸಿ 6.9 ಕೋಟಿ ರೂ. ನಗದು ಮತ್ತು 20 ಲಕ್ಷ ಶೇರ್ ನೀಡುವುದಾಗಿ ಹೇಳಿ ನಂಬಿಸಿ, ಅಂತಿಮವಾಗಿ ತಮಗೆ ಬರಬೇಕಾದ 33 ಕೋಟಿ ರೂಪಾಯಿ ನೀಡದೆ ವಂಚಿಸಿದ್ದಾರೆ ಎಂದು ದೀಲಿಪ್ ದೂರಿನಲ್ಲಿ ತಿಳಿಸಿದ್ದಾರೆ.
ಈ ವಂಚನೆ ಜಾಲದಲ್ಲಿ ಕಂಪನಿಯ ಸಿಇಓ ಆನಂದರಾವ್ ಮಾತ್ರವಲ್ಲದೆ, ಕಂಪನಿಯ ಚೇರ್ಮನ್ ಪೀಟರ್ ಜಫ್ರಿ ಜರ್ಮೈನ್, ಸಿಟಿಓ ರಾಘವೇಂದ್ರ ಅಗರ್ವಾಲ್, ನಿರ್ದೇಶಕಿ ಸ್ಮಿತಾ ಶಾಹು ಮತ್ತು ಬೋರ್ಡ್ ಸದಸ್ಯ ಅಶುತೋಷ್ ಶ್ರೀವಾಸ್ತವ ಅವರು ಸೇರಿಕೊಂಡು ಉದ್ದೇಶಪೂರ್ವಕವಾಗಿ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2026, ಐಪಿಸಿ ಕಲಂ 409, 420 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.