ಡೈಲಿವಾರ್ತೆ:23/ಏಪ್ರಿಲ್ /2026

ಕುಂದಾಪುರದ ಕೀರ್ತಿ ಪತಾಕೆ ಹಾರಿಸಿದ ಸಮೀಕ್ಷಾ: ಎಸ್ಸೆಸ್ಸೆಲ್ಸಿ ಯಲ್ಲಿ ರಾಜ್ಯಕ್ಕೆ 5ನೇ ರ‍್ಯಾಂಕ್ – ಶಾಲೆಯಿಂದ 50 ಸಾವಿರ ರೂ. ನಗದು ಪುರಸ್ಕಾರ​

ಕುಂದಾಪುರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕುಂದಾಪುರದ ಯಡಾಡಿ-ಮತ್ಯಾಡಿಯ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ರಾಜ್ಯಮಟ್ಟದಲ್ಲಿ 5ನೇ ರ‍್ಯಾಂಕ್‌ ಪಡೆಯುವ ಮೂಲಕ ಜಿಲ್ಲೆ ಮತ್ತು ತಾಲೂಕಿಗೆ ಹೆಮ್ಮೆ ತಂದಿದ್ದಾಳೆ.

ಸಮೀಕ್ಷಾ ಒಟ್ಟು 625 ಅಂಕಗಳಿಗೆ 621 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಗ್ರಾಮೀಣ ಭಾಗದ ಶಾಲೆಯೊಂದರ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಮಿಂಚಿರುವುದು ಶಿಕ್ಷಣ ಕ್ಷೇತ್ರದಲ್ಲಿ ಭರವಸೆಯ ಬೆಳಕಾಗಿ ಮೂಡಿಬಂದಿದೆ.

ಈ ಮಹತ್ತರ ಸಾಧನೆಯನ್ನು ಗೌರವಿಸಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಆಡಳಿತ ಮಂಡಳಿಯು ಸಮೀಕ್ಷಾಗೆ ತಕ್ಷಣವೇ 50,000 ರೂ. ನಗದು ಬಹುಮಾನ ಘೋಷಿಸಿ ಅಭಿನಂದಿಸಿದೆ.​

ಯಶಸ್ಸಿನ ಸೂತ್ರ – ಐಐಟಿ ಫೌಂಡೇಶನ್:ತನ್ನ ಸಾಧನೆಯ ಕುರಿತು ಮಾತನಾಡಿದ ಸಮೀಕ್ಷಾ, “ನನ್ನ ಯಶಸ್ಸಿನಲ್ಲಿ ಶಾಲೆಯ ಶಿಕ್ಷಕರ ಪಾತ್ರ ದೊಡ್ಡದಿದೆ. ಶಾಲೆಯಲ್ಲಿ 6ನೇ ತರಗತಿಯಿಂದಲೇ ನೀಡಲಾಗುವ ಐಐಟಿ-ನೀಟ್ (IIT-NEET) ಫೌಂಡೇಶನ್ ಕೋರ್ಸ್ ನನ್ನ ತಾರ್ಕಿಕ ಚಿಂತನೆಯನ್ನು ಬೆಳೆಸಿತು. ಇದು ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಗರಿಷ್ಠ ಅಂಕ ಗಳಿಸಲು ಸಹಕಾರಿಯಾಯಿತು ಎಂದು ಹರ್ಷ ವ್ಯಕ್ತಪಡಿಸಿದಳು. ಮುಂದಿನ ಪದವಿಪೂರ್ವ ಶಿಕ್ಷಣಕ್ಕೆ (PUC) ತಾನು ಓದಿದ ಸಂಸ್ಥೆಯದ್ದೇ ಆದ ಕುಂದಾಪುರದ ಸುಜ್ಞಾನ ಪಿಯು ಕಾಲೇಜನ್ನು ಅವಳು ಆಯ್ದುಕೊಂಡಿದ್ದಾಳೆ.​

ಆಡಳಿತ ಮಂಡಳಿಯ ಹರ್ಷ:ವಿದ್ಯಾರ್ಥಿನಿಯ ಅಪ್ರತಿಮ ಸಾಧನೆಗೆ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್‌ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ ಚಂದ್ರ ಶೆಟ್ಟಿ, ಖಜಾಂಚಿ ಭರತ್‌ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಪ್ರದೀಪ ಹಾಗೂ ಬೋಧಕ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿನಿಯ ಸತತ ಪರಿಶ್ರಮ ಇಂದು ರಾಜ್ಯಮಟ್ಟದಲ್ಲಿ ಫಲ ನೀಡಿದೆ ಎಂದು ಆಡಳಿತ ಮಂಡಳಿ ಹರ್ಷ ಹಂಚಿಕೊಂಡಿದೆ.