ಡೈಲಿವಾರ್ತೆ:23/ಏಪ್ರಿಲ್ /2026

ಅಂಧ ವಿದ್ಯಾರ್ಥಿನಿಗೆ ಅನ್ಯಾಯ: ಪರೀಕ್ಷೆ ಬರೆದರೂ ‘ಅಬ್ಸೆಂಟ್’ ಎಂದು ಫೇಲ್ – ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ

ಕಾರವಾರ, ಏಪ್ರಿಲ್ 23: ಪರೀಕ್ಷೆಗೆ ಹಾಜರಾಗಿದ್ದರೂ ‘ಹಾಜರಾಗಿಲ್ಲ’ ಎಂದು ದಾಖಲಿಸಿ ಅಂಧ ವಿದ್ಯಾರ್ಥಿನಿಯೊಬ್ಬಳನ್ನು ಫೇಲ್ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೆಳಕಿಗೆ ಬಂದಿದೆ.

ಈ ಘಟನೆ ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ದೋಷಪೂರಿತ ನಿರ್ವಹಣೆಯ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿದೆ.

ಶಿರಸಿ ನಗರದ ಇಂದಿರಾ ನಗರದ ಯುನಿಯನ್ ಉರ್ದು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಲೀಸಾ ಖಾನಮ್ ಅಂಧ ವಿದ್ಯಾರ್ಥಿನಿಯಾಗಿದ್ದು, ನಿಯಮಾನುಸಾರ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ವಿನಾಯಿತಿ ನೀಡಲಾಗಿತ್ತು. ಅದರ ಬದಲಾಗಿ ಪೊಲಿಟಿಕಲ್ ಸೈನ್ಸ್ ಮತ್ತು ಎಕನಾಮಿಕ್ಸ್ ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿನಿ ಎಲ್ಲ ಪರೀಕ್ಷೆಗಳಿಗೆ ಹಾಜರಾಗಿದ್ದು, ಸಮಾಜ ವಿಜ್ಞಾನ ಪರೀಕ್ಷೆಯನ್ನೂ ಬರೆದಿದ್ದರೂ ಫಲಿತಾಂಶದಲ್ಲಿ ಆ ವಿಷಯಕ್ಕೆ ‘ಅಬ್ಸೆಂಟ್’ ಎಂದು ನಮೂದಿಸಿರುವುದು ದೊಡ್ಡ ಗೊಂದಲಕ್ಕೆ ಕಾರಣವಾಗಿದೆ.

ಲೀಸಾ ಖಾನಮ್ ಉರ್ದು – 124, ಕನ್ನಡ – 100, ಇಂಗ್ಲೀಷ್ – 92, ಎಕನಾಮಿಕ್ಸ್ – 98, ಪೊಲಿಟಿಕಲ್ ಸೈನ್ಸ್ – 92 ಅಂಕಗಳನ್ನು ಗಳಿಸಿ ಒಟ್ಟು 526 ಅಂಕಗಳೊಂದಿಗೆ 84.16% ಸಾಧನೆ ಮಾಡಿದ್ದರೂ, ಒಂದೇ ವಿಷಯದಲ್ಲಿ ‘ಅಬ್ಸೆಂಟ್’ ಎಂದು ನಮೂದಿಸಿರುವುದರಿಂದ ಆಕೆಯನ್ನು ಫೇಲ್ ಎಂದು ಘೋಷಿಸಲಾಗಿದೆ.

ಅಂಧತ್ವ ಇದ್ದರೂ ತುಂಬಾ ಕಷ್ಟಪಟ್ಟು ಕೇಳಿಸಿಕೊಂಡು ಎಲ್ಲಾ ಪರೀಕ್ಷೆಗಳನ್ನು ಬರೆದಿದ್ದೇನೆ. ಆದರೂ ಹೀಗೆ ಅನ್ಯಾಯ ಮಾಡಲಾಗಿದೆ ಎಂದು ವಿದ್ಯಾರ್ಥಿನಿ ತನ್ನ ನೋವನ್ನು ಹೊರಹಾಕಿದ್ದಾಳೆ. ಈ ಕುರಿತು ಸಂಬಂಧಿತ ಎಲ್ಲಾ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದ್ದು, ತಕ್ಷಣದ ಕ್ರಮ ಕೈಗೊಂಡು ಆಗಿರುವ ಯಡವಟ್ಟನ್ನು ಸರಿಪಡಿಸಬೇಕು ಎಂದು ಪೋಷಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಘಟನೆ ಪರೀಕ್ಷಾ ಮೌಲ್ಯಮಾಪನ ಮತ್ತು ದಾಖಲೆ ನಿರ್ವಹಣೆಯಲ್ಲಿ ನಡೆಯುವ ತಪ್ಪುಗಳ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದ್ದು, ಶಿಕ್ಷಣ ಇಲಾಖೆಯ ಜವಾಬ್ದಾರಿತನದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.