


ಡೈಲಿವಾರ್ತೆ:30/ಸೆ./2026

ಕೊಲ್ಲೂರು: ಕೊಲೆ ಯತ್ನ ಪ್ರಕರಣದ ಬೆನ್ನಲ್ಲೇ ನಾಪತ್ತೆ – ಸೌಪರ್ಣಿಕಾ ನದಿ ಬಳಿ ಆರೋಪಿಗಳಿಬ್ಬರ ಶವ ಪತ್ತೆ!

ಕುಂದಾಪುರ: ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಗಳಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದ ಇಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ವಿಠಲ್ ನಾಯಕ್ (35) ಹಾಗೂ ಭವ್ಯಾ ಅಲಿಯಾಸ್ ನಿಶ್ಮಿತಾ (33) ಎಂದು ಗುರುತಿಸಲಾಗಿದೆ. ಇಬ್ಬರೂ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಾಗಿದ್ದು, ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ವಿಠಲ್ ನಾಯಕ್ ಅವರ ಪತ್ನಿಗೆ ವಿಷಕಾರಿ ಇಂಜೆಕ್ಷನ್ ನೀಡಿ ಕೊಲೆ ಮಾಡಲು ಯತ್ನಿಸಿದ ಆರೋಪ ಇಬ್ಬರ ಮೇಲಿತ್ತು. ಭವ್ಯಾ ನರ್ಸ್ ಎಂದು ಪರಿಚಯಿಸಿಕೊಂಡು ವಿಠಲ್ ಅವರ ಪತ್ನಿಗೆ ಇಂಜೆಕ್ಷನ್ ನೀಡಿದ್ದಳು ಎನ್ನಲಾಗಿದ್ದು, ಈ ಸಂಬಂಧ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಠಲ್ ಹಾಗೂ ಭವ್ಯಾ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಪ್ರಕರಣ ಬೆಳಕಿಗೆ ಬಂದ ಬಳಿಕ ಇಬ್ಬರೂ ನಾಪತ್ತೆಯಾಗಿದ್ದರು. ಆರೋಪಿಗಳ ಪತ್ತೆಗೆ ಕೊಲ್ಲೂರು ಪೊಲೀಸರು ಶೋಧ ನಡೆಸುತ್ತಿದ್ದ ವೇಳೆ, ಬೈಂದೂರು ಠಾಣೆ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದಲ್ಲಿ ಸೌಪರ್ಣಿಕಾ ನದಿ ಸಮೀಪ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ!

ಇಬ್ಬರೂ ಕೆಲವು ದಿನಗಳ ಹಿಂದೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ದೃಢಪಡಬೇಕಿದೆ.

ಮಾಹಿತಿ ಲಭ್ಯವಾಗುತ್ತಿದ್ದಂತೆ ಬೈಂದೂರು ಪೊಲೀಸರು ಹಾಗೂ ಸೋಕೋ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಬೈಂದೂರು ಸಿಪಿಐ ಶಿವಕುಮಾರ್, ಕೊಲ್ಲೂರು ಪಿಎಸ್‌ಐ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಬೈಂದೂರು ಪಿಎಸ್‌ಐ ಸುನೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹಗಳನ್ನು ಸ್ಥಳದಿಂದ ತೆರವುಗೊಳಿಸುವ ಕಾರ್ಯದಲ್ಲಿ ಟೀಮ್ ಎಂಎಚ್‌ಐ ಗಂಗೊಳ್ಳಿ ತಂಡದ ಇಬ್ರಾಹಿಂ ಗಂಗೊಳ್ಳಿ, ವಿಕಾಸ್ ಮೊಗವೀರ ಹಾಗೂ ವಿಲ್ಸನ್ ರೆಬೆರೋ ಸಹಕರಿಸಿದರು. ಮರದ ಮೇಲೆ ನೇತಾಡುತ್ತಿದ್ದ ಮೃತದೇಹದ ಭಾಗಗಳನ್ನು ಕೆಳಗಿಳಿಸುವುದು ಹಾಗೂ ಕೆಳಭಾಗದಲ್ಲಿ ಪತ್ತೆಯಾದ ಇತರ ಅವಶೇಷಗಳನ್ನು ವಿಂಗಡಿಸಿ ಪ್ಯಾಕ್ ಮಾಡಿ ಬೈಂದೂರು ಸರ್ಕಾರಿ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸುವ ಕಾರ್ಯದಲ್ಲಿ ತಂಡ ನೆರವಾಯಿತು.
ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸರು ತನಿಖೆ ಮುಂದುವರಿಸಿದ್ದು, ಇಬ್ಬರ ಸಾವಿನ ನಿಖರ ಕಾರಣ, ಸಾವಿಗೆ ಮುನ್ನ ನಡೆದಿರುವ ಬೆಳವಣಿಗೆಗಳು ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಇತರ ಆಯಾಮಗಳ ಕುರಿತು ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.