ಡೈಲಿ ವಾರ್ತೆ:06 ಫೆಬ್ರವರಿ 2023

ನಾವುಂದ : ಮದುವೆಗೆಂದು ಪಡೆದುಕೊಂಡಿದ್ದ ಚಿನ್ನಾಭರಣ ಹಿಂದಿರುಗಿಸದೆ ವಂಚನೆ

ಕುಂದಾಪುರ : ಮದುವೆಯ ಒಂದು ದಿನದ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಪಡೆದು, ಬಳಿಕ ವಾಪಸ್‌ ನೀಡದೆ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ
ಮರವಂತೆಯ ಮನ್ಸೂರ್‌ ಇಬ್ರಾಹಿಂ ಎಂಬವರಿಂದ ಅಬ್ಟಾಸ್‌ ಬಡಾಕೆರೆ, ನಾವುಂದದ ಸುಲೈಮಾನ್‌, ಗುಲ್ವಾಡಿಯ ಉಬೈದುಲ್ಲಾ ಎಂಬವರು ಎರಡು ವರ್ಷಗಳ ಹಿಂದೆ ಮದುವೆ ಕಾರ್ಯಕ್ರಮಕ್ಕೆಂದು ಪತ್ನಿ, ಮಕ್ಕಳ ಚಿನ್ನಾಭರಣ ಕೇಳಿ ಪಡೆದುಕೊಂಡು ಹೋಗಿದ್ದರು. ಒಂದು ದಿನದ ಕಾರ್ಯಕ್ರಮ ಮುಗಿಸಿ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಅದರಂತೆ ಇಬ್ರಾಹಿಂ ಅವರು ಪತ್ನಿಯ 3 ನೆಕ್ಲೆಸ್‌, ಮಕ್ಕಳ ಬ್ರಾಸ್ಲೆಟ್‌, ಚೈನ್‌, ಬಳೆ, ಮತ್ತೂಂದು ಚೈನ್‌ ಸಹಿತ ಒಟ್ಟು 4.50 ಲಕ್ಷ ರೂ. ಮೌಲ್ಯದ 12 ಪವನ್‌ ಚಿನ್ನಾಭರಣವನ್ನು ನೀಡಿದ್ದರು. ಆದರೆ ಅವುಗಳನ್ನು ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಮನ್ಸೂರ್‌ ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಚಾರಿಸಿದಾಗ ಚಿನ್ನಾಭರಣಗಳನ್ನು ವಿವಿಧ ಹಣಕಾಸು ಸಂಸ್ಥೆಯಲ್ಲಿ ಅಡವಿಟ್ಟಿರುವುದಾಗಿ ಹಾಗೂ ಒಂದು ತಿಂಗಳಲ್ಲಿ ಬಿಡಿಸಿಕೊಡುವುದಾಗಿ ನಂಬಿಸಿದ್ದಾರೆ. ಮತ್ತೆ ವಿಚಾರಿಸಿದಾಗ 4 ಲಕ್ಷ ರೂ. ನೀಡುವಂತೆ ಕೇಳಿದ್ದು, 6 ತಿಂಗಳಲ್ಲಿ ವಾಪಸ್‌ ನೀಡುವುದಾಗಿ ನಂಬಿಸಿ, ಪಡೆದುಕೊಂಡಿದ್ದಾರೆ. ಆದರೆ ಹಣ ಹಾಗೂ ಚಿನ್ನವನ್ನೂ ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ