ಡೈಲಿ ವಾರ್ತೆ:24 ಮಾರ್ಚ್ 2023

ಪಾಂಗಾಳ ಶರತ್ ಶೆಟ್ಟಿ ಕೊಲೆ ಆರೋಪಿ ಪಾತಾಳದಲ್ಲಿದ್ದರೂ ಹುಡುಕುತ್ತೇನೆ!” ಪಂಜುರ್ಲಿ ದೈವದ ಅಭಯ ನುಡಿ

ಕಾಪು: ತಾಲೂಕಿನ ಪಾಂಗಾಳ ಶರತ್ ವಿ. ಶೆಟ್ಟಿ ಕೊಲೆಯಾಗಿ ತಿಂಗಳುಗಳೇ ಕಳೆದಿವೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಮಂದಿಯ ಬಂಧನವೂ ಆಗಿದೆ. ಶರತ್ ವಿ. ಶೆಟ್ಟಿ (42) ಪಾಂಗಾಳ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲನಾಗಿರುತ್ತಿದ್ದರು. ಇವರು ಪಾಂಗಾಳ ಪಡುವಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯುತ್ತಿದ್ದ ನೇಮದಲ್ಲಿ ಪಾಲ್ಗೊಂಡಿದ್ದಾಗ ಮಾತುಕತೆಗೆಂದು ಕರೆದ ದುಷ್ಕರ್ಮಿಗಳು, ಬಳಿಕ ಮಾರಕಾಸ್ತ್ರದಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಪಾಂಗಾಳ ಶರತ್ ವಿ ಶೆಟ್ಟಿ ಕುಟುಂಬಸ್ಥರು ದೈವದ ಮೊರೆ ಹೋಗಿದ್ದಾರೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಪತ್ತೆಯಾಗಬೇಕು ಎಂದು ನಿನ್ನೆ ರಾತ್ರಿ ಪಾಂಗಾಳದ ಮನೆಯಲ್ಲಿ ವರ್ತೆ ಪಂಜುರ್ಲಿ ನೇಮೋತ್ಸವವನ್ನು ಆಯೋಜಿಸಲಾಗಿತ್ತು. ಈ ವೇಳೆ ಶರತ್ ಶೆಟ್ಟಿ ಕೊಲೆ ಆರೋಪಿಗಳು ಪಾತಾಳದಲ್ಲಿ ಅಡಗಿ ಕುಳಿತರೂ ಹುಡುಕುತ್ತೇನೆ ಎಂದು ಪಂಜುರ್ಲಿ ದೈವವು ಅಭಯ ನುಡಿದಿದೆ.
ಕೊಲೆಯಾಗಿ ತಿಂಗಳು ಕಳೆದರೂ ಪ್ರಮುಖ ಆರೋಪಿ ಸೆರೆಯಾಗಿಲ್ಲ ಎಂದು ಕುಟುಂಬಿಕರು ತಮ್ಮ ಅಳಲನ್ನು ತೋಡಿಕೊಂಡ ಬಗ್ಗೆ ದೈವವೂ ಆದಷ್ಟು ಶೀಘ್ರವಾಗಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ. ಕುಟುಂಬಕರು ಧೈರ್ಯಗೆಡುವುದು ಬೇಡ ಎಂದಿದೆ.
ಈ ಸಂದರ್ಭ ಶ್ರೀಮತಿ ಮತ್ತು ಶ್ರೀ ಹರಿಶ್ಚಂದ್ರ ಶೆಟ್ಟಿ ಮತ್ತು ಕುಟುಂಬಿಕರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿದರು.