ಡೈಲಿ ವಾರ್ತೆ:18 ಏಪ್ರಿಲ್ 2023
ಪರೀಕ್ಷೆ ಬರೆದು ವಾಪಸ್ಸಾಗ್ತಿದ್ದ ಯುವತಿ ಮೇಲೆ ಗುಂಡು ಹಾರಿಸಿ ಹತ್ಯೆ
ಉತ್ತರ ಪ್ರದೇಶ: ಕಾಲೇಜು ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ 20 ವರ್ಷದ ಯುವತಿಯನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದ ಜಲೌನ್ ಜಿಲ್ಲೆಯಲ್ಲಿ ನಡೆದಿದೆ
ರೋಶ್ನಿ ಅಹಿರ್ವಾರ್ ಎಂಬ ಯುವತಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಈಕೆ ಬಿಎ ವಿದ್ಯಾರ್ಥಿನಿ.
ತನ್ನ ಕಾಲೇಜಿನಲ್ಲಿ ಪರೀಕ್ಷೆ ಬರೆದು ಮನೆಗೆ ಹಿಂದಿರುಗುತ್ತಿದ್ದಾಗ ಆಕೆಯ ಮೇಲೆ ದಾಳಿ ನಡೆದಿದೆ ಎಂದು ಆಕೆಯ ತಂದೆ ಮಾನ್ ಸಿಂಗ್ ಹೇಳಿದ್ದಾರೆ. ಕಂಟ್ರಿಮೇಡ್ ಪಿಸ್ತೂಲ್ ನಿಂದ ಆಕೆಯ ತಲೆಗೆ ಗುಂಡು ಹಾರಿಸಿದ ದುಷ್ಕರ್ಮಿಗಳು ಆಯುಧವನ್ನು ಶವದ ಬಳಿ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಯುವತಿಯನ್ನು ಗುಂಡಿಕ್ಕಿ ಕೊಂದ ಸ್ಥಳ ಸ್ಥಳೀಯ ಪೊಲೀಸ್ ಠಾಣೆಯಿಂದ ಸುಮಾರು 200 ಮೀಟರ್ ದೂರದಲ್ಲಿದೆ. ದಾಳಿಕೋರರು ಯುವತಿಗೆ ಪರಿಚಯಸ್ಥರೆ ಆಗಿರಬಹುದು ಎಂದು ಜಲೌನ್ ಪೊಲೀಸ್ ವರಿಷ್ಠಾಧಿಕಾರಿ ಇರಾಜ್ ರಾಜಾ ಹೇಳಿದ್ದಾರೆ. ಕೊಟ್ರಾ ಟ್ರೈಸೆಕ್ಷನ್ ಬಳಿ ಯುವತಿ ಬಂದಾಗ ಮುಖ ಮುಚ್ಚಿಕೊಂಡ ಇಬ್ಬರು ವ್ಯಕ್ತಿಗಳು ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.