ಡೈಲಿ ವಾರ್ತೆ: 29ಜೂನ್ 2023
ಇನ್ಸ್ಟಾಗ್ರಾಮ್ ಪರಿಚಯ:20 ದಿನಗಳ ಕಾಲ ದೈಹಿಕ ಸಂಪರ್ಕ – ಯುವತಿಯಿಂದ ದೂರು ಆರೋಪಿಯ ಬಂಧನ!
ಮಂಗಳೂರು: ಇನ್ಸ್ಟಾಗ್ರಾಮ್ ನಲ್ಲಿ ಪರಿಚಿತನಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ಸತತ 20 ದಿನಗಳ ಕಾಲ ಹೋಟೆಲ್ ರೂಂ ನಲ್ಲಿ ದೈಹಿಕ ಸಂಪರ್ಕ ನಡೆಸಿ ಇದೀಗ ಕೈಕೊಟ್ಟಿದ್ದಾನೆ ಎಂದು ಬಂಟ್ವಾಳದ ವಿದ್ಯಾರ್ಥಿನಿಯೊಬ್ಬಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಬಂಟ್ವಾಳ ಮೂಲದ ಮುಸ್ಲಿಂ ಯುವತಿ ಮಂಗಳೂರಿನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದು, ಈ ವೇಳೆ ಕಡಬ ಮೂಲದ ಅನೀಸ್ ರೆಹಮಾನ್ ಎಂಬಾತನನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ ಅನೀಸ್ ರೆಹಮಾನ್ ಮೇ 28ರಂದು ಮಂಗಳೂರಿನ ಪೂಂಜಾ ಇಂಟರ್ನ್ಯಾಷನಲ್ ಹೊಟೇಲ್ ಗೆ ಕರೆಸಿಕೊಂಡು ನಿರಂತರ 20 ದಿನಗಳ ಕಾಲ ದೈಹಿಕ ಸಂಪರ್ಕ ನಡೆಸಿದ್ದ. ಆದರೆ ಬಳಿಕ ಆತ ಈಗಾಗಲೇ ಮದುವೆಯಾಗಿರುವ ವಿಚಾರ ಯುವತಿಗೆ ತಿಳಿದಿದೆ.
ತಾನು ಮೋಸ ಹೋಗಿದ್ದು ಅರಿವಾಗುತ್ತಿದ್ದಂತೆ ಮಹಿಳೆ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿ ನೀಡಿದ ದೂರಿನಂತೆ ಆರೋಪಿ ಅನೀಸ್ ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಅಲ್ಲದೇ ಈ ಹಿಂದೆ ಆರೋಪಿಯ ವಿರುದ್ಧ ಕಾವೂರು ಪೋಲಿಸ್ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣವೂ ದಾಖಲಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.