ಡೈಲಿ ವಾರ್ತೆ:24 ಆಗಸ್ಟ್ 2023
ವರದಿ : ವಿದ್ಯಾಧರ ಮೊರಬಾ
ಅಂಕೋಲಾ:ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ವಿಶ್ವನಾಥ ಆಗೇರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತ್ಯು!
ಅಂಕೋಲಾ : ಪಟ್ಟಣದ ಕಾರವಾರ ರಸ್ತೆಯಲ್ಲಿ ಆ.22 ರಂದು ಸಂಜೆ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಇಬ್ಬರು ಬೈಕ್ ಸವಾರರಲ್ಲಿ ಓರ್ವ ಮಂಗಳೂರು ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲದಾಯಕವಾಗದೇ ಮೃತಪಟ್ಟಿರುವ ಘಟನೆ ಗುರುವಾರ ನಸುಕಿನ ವೇಳೆಯಲ್ಲಿ ನಡೆದಿದೆ.
ತಾಲೂಕಿನ ಹಿಲ್ಲೂರು ಹೊಸಕಂಬಿಯ ನಿವಾಸಿ ವಿಶ್ವನಾಥ ಹನುಮಂತ ಆಗೇರ (19) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಈತನು ಆ.22 ರಂದು ಕಾರವಾರ ರಸ್ತೆಯ ನೀಲಂಪುರ ಮಾರ್ಗವಾಗಿ ಅಂಕೋಲಾ ಪಟ್ಟಕ್ಕೆ ಬರುತ್ತಿದ್ದ ವೇಳೆ ಬೈಕ್ ಚಾಲನೆಯಲ್ಲಿ ನಿಯಂತ್ರಣ ತಪ್ಪ ರಸ್ತೆಯ ಡಿವೈಡರ್ ಮತ್ತು ದಾರಿದೀಪದ ಕಂಬಕ್ಕೆ ಡಿಕ್ಕಿಹೊಡೆದ ಪರಿಣಾಮವಾಗಿ ಬೈಕ್ ಸವಾರ ನಿಶ್ವನಾಥ ಆಗೇರ ಮತ್ತು ಹಿಂಬಂದಿ ಸವಾರ ಗೋಕರ್ಣ ಸಮೀಪದ ಹನೇಹಳ್ಳಿ ನಿವಾಸಿ ವಿಕಾಶ ಹೊನ್ನಾ ಆಗೇರ ರಸ್ತೆ ಅಂಚಿಗೆ ಸಿಡಿದು ಗಂಭೀರ ಗಾಯಗೊಂಡಿದ್ದರು. ಇವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕತ್ಸೆಗೆ ಒಳಪಡಿಸಿ, ಹೆಚ್ಚಿನ ಉಪಚಾರಕ್ಕಾಗಿ ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಂದ ಗಾಯಾಳಿಬ್ಬರನ್ನು ಮಂಗಳೂರು ವೆನ್‍ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಿದರು. ಈ ಕುರಿತು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ದೂರು ನೀಡಿದ್ದರು. ಪಿಎಸ್‍ಐ ಸುನೀಲ ಹುಲ್ಲೊಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದರು.