ಡೈಲಿ ವಾರ್ತೆ: 19/OCT/2023
ಜೆಡಿಎಸ್ ಯಿಂದ ಸಿಎಂ ಇಬ್ರಾಹಿಂ ಉಚ್ಛಾಟನೆ: ರಾಜ್ಯಾಧ್ಯಕ್ಷರಾಗಿ ಎಚ್. ಡಿ. ಕುಮಾರಸ್ವಾಮಿ ನೇಮಕ
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಅವರನ್ನು ಉಚ್ಛಾಟಿಸಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ನೇಮಕ ಮಾಡಿದ್ದಾರೆ.
ಇಂದು ನಡೆದ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ ದೇವೇಗೌಡ, ಹಿಂದಿನ ಅಧ್ಯಕ್ಷರು ಈ ಹಿಂದೆ ಏನು ಹೇಳಿದ್ದಾರೋ ಅದನ್ನು ನಾನಿಲ್ಲಿ ಪ್ರಸ್ತಾಪ ಮಾಡುವುದಿಲ್ಲ. ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡಿದ್ದೇವೆ. ಅವರಿಂದ ತೆರವಾದ ಸ್ಥಾನಕ್ಕೆ ಎಚ್. ಡಿ. ಕುಮಾರಸ್ವಾಮಿ ಅವರನ್ನು ನೇಮಕ ಮಾಡಿದ್ದೇವೆ ಎಂದರು.
19 ಶಾಸಕರು, 8 ಮೇಲ್ಮನೆ ಸದಸ್ಯರ ಅಭಿಪ್ರಾಯ ಪಡೆಯಲಾಗಿದೆ. ನಾವಿಂದು ಬಿಜೆಪಿ ಜತೆ ಹೋಗಬೇಕಾದ ಸನ್ನಿವೇಶವನ್ನು ಸೃಷ್ಟಿ ಮಾಡಿದ್ದು ಯಾರು ಎಂದು ಪ್ರಶ್ನೆ ಮಾಡುವ ಮೂಲಕ ಪರೋಕ್ಷವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಅಸಮಾಧಾನ ಹೊರಹಾಕಿದ ಎಚ್ಡಿ. ಡಿ, ನಾವು ಬಿಜೆಪಿ ಜತೆ ಲೋಕಸಭೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದೇವೆ ಅಷ್ಟೇ ಹಾಗಂತ ಅವರ ಸರ್ಕಾರದಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಮೈತ್ರಿಯಿಂದ ಜೆಡಿಎಸ್ ಸಿದ್ಧಾಂತಗಳಿಗೆ ಯಾವುದೇ ತೊಡಕಾಗುವುದಿಲ್ಲ. ಈಗಲೂ ಸಾಕಷ್ಟು ಯುವ ಮುಸ್ಲಿಂ ಮುಖಂಡರು ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ಎಚ್ಡಿಡಿ ಹೇಳಿದರು.
32 ಜನ ಶಾಸಕರು ಒಮ್ಮುಮತದಿಂದ ಮುಸ್ಲಿಂ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ಈಗ ನಾವು ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಧ್ಯಕ್ಷರನ್ನಾಗಿ ನೇಮಕ ಮಾಡಲು ತೀರ್ಮಾನಿಸಿದ್ದೇವೆ. ಇಬ್ರಾಹಿಂ ಅವರನ್ನು ಉಚ್ಚಾಟಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು.