ಡೈಲಿ ವಾರ್ತೆ: 29/NOV/2023
ಹೊರೈಝನ್ ಶಾಲೆಯ ವಿದ್ಯಾರ್ಥಿಗಳಿಂದ ಪೊಲೀಸ್ ಠಾಣೆ ಭೇಟಿ.
ವಿಟ್ಲ : ವಿಟ್ಲ – ಮೇಗನಪೇಟೆಯ ಹೊರೈಝನ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಬುಧವಾರ ವಿಟ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆರಕ್ಷಕ ಅಧಿಕಾರಿಗಳ ಪಾತ್ರ ಹಾಗೂ ಠಾಣೆಯ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡ ಎ.ಎಸ್.ಐ ತಿಮ್ಮೇ ಗೌಡ ಅವರು ವಿದ್ಯಾರ್ಥಿಗಳಿಗೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಅಧ್ಯಯನ ಮಾಡಿದ ವಿಷಯಗಳನ್ನು ನೇರವಾಗಿ ಕಂಡಾಗ ಕಲಿಕೆ ಇನ್ನಷ್ಟು ಪುಷ್ಟೀಕರಣ ಗೊಳ್ಳುತ್ತದೆ. ಇದು ಅನುಭವ ಕಲಿಕೆಗೆ ದಾರಿ ಮಾಡಿಕೊಡುತ್ತದೆ.
ಪೊಲೀಸ್ ಠಾಣೆಯ ಭೌತಿಕ ರಚನೆ ಮತ್ತು ಪೊಲೀಸ್ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯಗಳ ಸ್ವರೂಪವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವುದು , ರಾಜ್ಯದ ಪೊಲೀಸ್ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಿಸುವುದು ಈ ಪ್ರವಾಸದ ಉದ್ದೇಶವಾಗಿದೆ ಎಂದರು .
ವಿದ್ಯಾರ್ಥಿಗಳು ವೈರ್‌ಲೆಸ್ ಕೊಠಡಿ, ಪೊಲೀಸ್ ಲಾಕಪ್ ಮತ್ತು ಶಸ್ತ್ರಾಸ್ತ್ರ ಸೇರಿದಂತೆ ಪೊಲೀಸ್ ಠಾಣೆಯ ವಿವಿಧ ವಿಭಾಗಗಳನ್ನು ಕುತೂಹಲದಿಂದ ವೀಕ್ಷಿಸಿದರು.
ಪೊಲೀಸ್ ಠಾಣಾಧಿಕಾರಿಗಳು, ಸಿಬ್ಬಂದಿಗಳಿಗೆ ವಿದ್ಯಾರ್ಥಿಗಳು ಗುಲಾಬಿ ಹೂ ನೀಡಿ ಗೌರವ ಸಲ್ಲಿಸಿದರು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಕೆ.ಎಂ. ಅಶ್ರಫ್, ಶಾಲಾ ಶಿಕ್ಷಕಿಯರು, ವಿಟ್ಲ ಠಾಣಾ ಸಿಬ್ಬಂದಿಗಳಾದ ಅಶೋಕ್, ಅರ್ಪಿತಾ, ಸವಿತಾ, ಹೇಮರಾಜ್, ಪೂಜಾ, ಚಿತ್ರಲೇಖ ಮೊದಲಾದವರು ಉಪಸ್ಥಿತರಿದ್ದರು.