ಡೈಲಿ ವಾರ್ತೆ: 05/JAN/2024
ಕರಸೇವಕನ ಬಂಧನ ಪ್ರಕರಣದಲ್ಲಿ ಜೋಶಿ ಕೈವಾಡ: ಶೆಟ್ಟರ್ ಗಂಭೀರ ಆರೋಪ
ಹುಬ್ಬಳ್ಳಿ: ಕರ ಸೇವಕನ ಬಂಧನ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಕೈವಾಡ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ವರ್ಷದ ಹಿಂದಿನ ಪ್ರಕರಣವನ್ನು ಪರಿಷ್ಕರಣೆ ಮಾಡಿಕೊಂಡು ವಾಪಸ್ ಪಡೆಯಬೇಕಿತ್ತು. ಈಗ ಹೋರಾಟ ಮಾಡುವವರು ಕರಸೇವಕರ ಮೇಲಿನ ಕೇಸ್ ವಾಪಸ್ ಪಡೆಯೋ ಪ್ರಯತ್ನ ಯಾಕೆ ಮಾಡಲಿಲ್ಲ? 7-8 ವರ್ಷ ಬಿಜೆಪಿ (BJP) ಅಧಿಕಾರದಲ್ಲಿತ್ತು. ನಾನು ಕೇವಲ 10 ತಿಂಗಳು ಸಿಎಂ ಆಗಿದ್ದು, ಹಿಂದೆ ಪ್ರಯತ್ನಿಸಿದ್ದೇನೆ ಎಂದಿದ್ದಾರೆ.
ಆರ್.ಅಶೋಕ್ ಅವರು ಹೋಮ್ ಮಿನಿಸ್ಟರ್ ಆಗಿದ್ದರು. ಆಗ ಯಾಕೆ ಕೇಸ್ ವಾಪಸ್ ಪಡೆಯಲಿಲ್ಲ? ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋಕೆ ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ. ಇದೆಲ್ಲ ಚುನಾವಣೆ ಗಿಮಿಕ್, ಇದರಲ್ಲಿ ಪ್ರಹ್ಲಾದ್ ಜೋಶಿಯವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ನಿರ್ದೇಶನದಲ್ಲಿ ಕರ ಸೇವಕನ ಬಂಧನ ಆಗಿಲ್ಲ. ಹಿಂದೂ ಮುಸ್ಲಿಂ ಡಿವೈಡ್ ಮಾಡೋದೇ ನಿಮ್ಮ ಉದ್ದೇಶವಾಗಿದೆ. ಮಣಿಕಂಠ ರಾಠೋಡ್ ವಿರುದ್ಧ ಹತ್ತಾರು ಕ್ರಿಮಿನಲ್ ಕೇಸ್‍ಗಳಿವೆ. ಅಂಥವರಿಗೆ ಬಿಜೆಪಿಯವರು ಟಿಕೆಟ್ ಕೊಟ್ಟಿದ್ದರು. ಈಗ ಧಾರ್ಮಿಕ ವಿಚಾರಗಳ ಮೇಲೆ ಅಧಿಕಾರಕ್ಕೆ ಬರುತ್ತೇವೆ ಎಂದರೆ ಅದು ಭ್ರಮೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳಿಗೆ ಕೈ ಹಾಕಿ ಬಿಜೆಪಿ ಕೈಸುಟ್ಟುಕೊಂಡಿದೆ. ಈಗಲೂ ಅವರು ಏನೇ ಭಾವನಾತ್ಮಕ ವಿಚಾರ ಮಾಡಲು ಹೋದರೂ ಅವರಿಗೆ ಲಾಭ ಆಗುವುದಿಲ್ಲ ಎಂದಿದ್ದಾರೆ.
ಅಯೋಧ್ಯೆಯ ರಾಮಮಂದಿರಕ್ಕೆ ಆಹ್ವಾನ ಇಲ್ಲದ ವಿಚಾರವಾಗಿ, ನನ್ನನ್ನು ಕರೆಯಿರಿ ಎಂದು ಎಲ್ಲೂ ಹೇಳಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿದ್ದವರ ಬಗ್ಗೆ ಸಂಸದೀಯ ಪದ ಬಳಸಿ ಬಿಜೆಪಿಯವರು ಟೀಕೆ ಮಾಡಲಿ. ಒಂದು ವೇಳೆ ಪ್ರಧಾನಿ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆಗುತ್ತಾ? ಕೀಳು ಮಟ್ಟದ ಪದ ಬಳಸಿದರೆ ಹೇಗೆ? ಎಂದು ಬಿಜೆಪಿಗರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.