ಡೈಲಿ ವಾರ್ತೆ: 14/April/2024

ದ್ವಿತೀಯ ಪಿಯುಸಿ ಫಲಿತಾಂಶ: ಹರಪನಹಳ್ಳಿಯ ಟೈಲರ್ ಮಗಳು ಎನ್.ಎಮ್. ಸುಷ್ಮೀತ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಸಾಧನೆ.!

ಹರಪನಹಳ್ಳಿ : – ಸಾಧನೆಗೆ ಬಡತನ ಅಡ್ಡಿಯಲ್ಲ, ಆತ್ಮವಿಶ್ವಾಸವೊಂದಿದ್ದರೆ ಸಾಕು ಎಂತಹ ಸಾಧನೆ ಮಾಡಬಹುದು ಎನ್ನುವುದಕ್ಕೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಎನ್.ಎಮ್.ಸುಷ್ಮೀತ
571ಅಂಕಗಳಿಸಿ 95.16% ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾಳೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದ ಎನ್.ಎಮ್. ಸುಷ್ಮೀತಳ ತಂದೆ – ತಾಯಿ ಒಂದು ಮಧ್ಯಮ ಕುಟುಂಬ. ತಂದೆ ಎಮ್ ನಾಗರಾಜ್ ಪುಟ್ಟ ಬಟ್ಟೆ  ಅಂಗಡಿ ವ್ಯಾಪಾರಿ ಹಾಗೂ ಟೈಲರಿಂಗ್ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ.  ಸಣ್ಣ – ಪುಟ್ಟ ಆದಾಯದಲ್ಲಿ ಮಗಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಟೈಲರಿಂಗ್ ವೃತ್ತಿ ಮಾಡುವ ಎಂ. ನಾಗರಾಜ ಇವರ ಮಗಳು ವಿಧ್ಯಾಭ್ಯಾಸದಲ್ಲಿ ಚುರುಕಾಗಿರುವ ಎನ್.ಎಂ ಸುಷ್ಮೀತ   ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 571ಅಂಕಗಳಿಸಿ 95.16% ಪಡೆದು ಅತ್ಯುತ್ತಮ ಸಾಧನೆ ಮಾಡಿರುವುದು ತಂದೆ – ತಾಯಿಯವರಿಗೆ ಬಂದು ಬಳಗದವರಿಗೆ ಹಾಗೂ ಹಿತೈಷಿಗಳಿಗೆ ಖುಷಿ ತಂದಿದೆ.

ನನಗೆ  ಬೆನ್ನೆಲುಬಾದ ತಂದೆ-ತಾಯಿಯವರ
ಪ್ರೋತ್ಸಹ ನನ್ನ ಪ್ರತಿಭೆಗೆ ನೀರೆರೆದು ಸಹಕರಿಸಿದ್ದು ಹಾಗೂ ನಮ್ಮ ಕಾಲೇಜಿನ ಉಪನ್ಯಾಸಕರ ಪ್ರೇರಣೆಯಿಂದ ನನ್ನ ವಿದ್ಯಾಭ್ಯಾಸದ ಸಾಧನೆಗೆ ಸಾಧ್ಯವಾಗಿದೆ ಎಂದು ಸುಷ್ಮೀತ ಭಾವುಕತೆಯಿಂದ ಹೇಳಿದ್ದಾಳೆ.

ಹರಿಹರ ತಾಲೂಕಿನ ಕುರುಬರಹಳ್ಳಿ ಮಾನ್ಯತಾ ಮಹಿಳಾ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ
ಎನ್.ಎಮ್. ಸುಷ್ಮೀತ ಬಡತನದಲ್ಲಿ ಅರಳಿದ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ. ಈ ಗ್ರಾಮೀಣ ಪ್ರದೇಶದ ಪ್ರತಿಭೆಗೆ ನೀಲಗುಂದ ಗ್ರಾಮದ ಮುಖಂಡರು, ಸ್ನೇಹಿತರು, ಹಿತೈಷಿಗಳು, ಬಂದು ಬಳಗದವರು ಸಂಭ್ರಮಿಸಿ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.