ಡೈಲಿ ವಾರ್ತೆ: 26/April/2024

ಲೋಕಸಭಾ ಚುನಾವಣೆ ಬಂಟ್ವಾಳ ತಾಲೂಕಿನಲ್ಲಿ ಶಾಂತಿಯುತ, ಶೇ.79.9 ಮತದಾನ

ಬಂಟ್ವಾಳ : ಬಂಟ್ವಾಳ ವಿಧಾನ ಸಭಾ ಕ್ಷೇತ್ರದದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಅಂದಾಜು ಶೇ.79.9 ಮತದಾನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ಬಂಟ್ವಾಳ ‌ವಿಧಾನ ಸಭಾ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದ್ದು, ಸೆಕೆಯನ್ನು ಲೆಕ್ಕಿಸದೆ ಜನರು ಮತದಾನ ಮಾಡಿದರು.
ಮಧ್ಯಾಹ್ನ 12 ವೇಳೆಗೆ ಕೂಡ ಮತಗಟ್ಟೆಯಲ್ಲಿ ಜನರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂತು.

    ಬೆಳಿಗ್ಗೆ ನಿಗಧಿತ 7 ಗಂಟೆಗೆ ಹೆಚ್ಚಿನೆಡೆ ಮತದಾನ ಆರಂಭವಾಗಿದ್ದು, ಸುಮಾರು 11 ಗಂಟೆಯ ವೇಳೆಗೆ ಶೇ.33.7,   ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.50.86, ಮದ್ಯಾಹ್ನ 3 ಗಂಟೆಯ ವೇಳೆಗೆ ಶೇ 61.17 ಮತದಾನವಾಗಿದೆ.

     ಬಿಸಿಲನ್ನು ಲೆಕ್ಕಿಸದೆ, ಸೆಕೆಯ ನಡುವೆಯೂ ಮತದಾರರು ತನ್ನ ಜವಾಬ್ದಾರಿಯನ್ನು ಅತ್ಯಂತ ಪ್ರಮಾಣಿಕವಾಗಿ ಬೂತ್ ಗೆ ತೆರಳಿ ಸರತಿ ಸಾಲಿನಲ್ಲಿ ನಿಂತುಕೊಂಡು ನಿಭಾಯಿಸಿದ್ದಾರೆ.
ಕೆಲವೊಂದು ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದೆ ಬಿಟ್ಟರೆ ಉಳಿದಂತೆ ಯಾವ ಗೊಂದಲಗಳಿಲ್ಲದೆ ಅತ್ಯಂತ ಶಾಂತ ರೀತಿಯ ಮತದಾನವಾಗಿದೆ.

    ಕೆಲವು ಮತಗಟ್ಟೆಯಲ್ಲಿ ಪ್ರಾರಂಭದಲ್ಲಿ ಮತಯಂತ್ರಗಳು ಕೈ ಕೊಟ್ಟರೆ ಇನ್ನು‌ಕೆಲವು ಕಡೆಗಳ ಮತಯಂತ್ರಗಳು ಮಧ್ಯಾಹ್ನ ವೇಳೆ ಕೆಟ್ಟು ಹೋಗಿದೆ.

   ಬಿ.ಸಿ.ರೋಡ್ ಸಮೀಪದ  ಕೈಕುಂಜೆ ಎ.ಪಿ.ಎಂ.ಸಿ. ಮತಗಟ್ಟೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 12.30 ರ ವರೆಗೆ ಅರ್ಧ ತಾಸುಗಳ ಕಾಲ ಯಂತ್ರ ಸ್ಥಗಿತಗೊಂಡ ಘಟನೆ ನಡೆಯಿತು. ಬಳಿಕ ಹೊಸ ಯಂತ್ರವನ್ನು ತರಿಸಿ ಮತದಾನ ಮಾಡಲಾಗಿದೆ.

ಬಿ.ಸಿ.ರೋಡಿನ ಅಜ್ಜಿಬೆಟ್ಟು  ಸರಕಾರಿ ಶಾಲೆಯಲ್ಲಿನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, 11 ಗಂಟೆಯಿಂದ 11.20 ರ ವರೆಗೆ 20 ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ಬಳಿಕ ಟೆಕ್ನೀಷಿಯನ್ ಬಂದು ಯಂತ್ರದ ರಿಪೇರಿ ಮಾಡಿ ಮತ್ತೆ ಮತದಾನ ಪ್ರಕ್ರಿಯೆ ಮುಂದುವರಿಯಿತು.

*ಕೈಕೊಟ್ಟ ವಿದ್ಯುತ್*

ಲೋಕಸಭಾ ಸಭಾ ಚುನಾವಣೆ ನಡೆಯುತ್ತಿರುವ ವೇಳೆ ವಿದ್ಯುತ್ ಅವಾಗ ಅವಾಗ ಕಣ್ಣು ಮುಚ್ಚಾಲೆ ಆಟ ಆಡುವುದು ಕಂಡು ಬಂತು.  ಕೊಠಡಿಯೊಳಗೆ ಪ್ಯಾನ್ ಇಲ್ಲದೆ ಕೂರಲು ಸಾಧ್ಯವಾಗದ ಸಮಯದಲ್ಲಿ ‌ಕರೆಂಟ್ ಕೈ ಕೊಟ್ಟಿರುವುದು ಸಾಕಷ್ಟು ತೊಂದರೆ ಉಂಟು‌ಮಾಡಿತ್ತು. ಇನ್ನೊಂದೆಡೆ  ಕೊಠಡಿಗಳು ಕತ್ತಲೆಯಾಗಿದ್ದು, ಮತದಾನ ಮಾಡಲು ಯಂತ್ರಗಳು ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ.

     ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು  ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜ್ ನಲ್ಲಿ ಮತದಾನ ಮಾಡಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಯವರು ಬಂಟ್ವಾಳ ತಾಲೂಕಿನ ಪಚ್ಚಿನಡ್ಕ ಕಳ್ಳಿಗೆ ಗ್ರಾಮದ ತೊಡಂಬಿಲ ಸೇಕ್ರೆಡ್ ಹಾರ್ಟ್ ಅನುದಾನಿತ ಹಿ. ಪ್ರಾ ಶಾಲೆ ಮತ ಗಟ್ಟೆಯಲ್ಲಿ ಮತಚಲಾಯಿಸಿದರು.

     ವೀರಕಂಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ಇಲ್ಲಿನ ಮತ ಕೇಂದ್ರ ಸಂಖ್ಯೆ 203 ರಲ್ಲಿ ವೀರಕಂಬ ಗಣೇಶ್ ನಿಲಯ ನಿವಾಸಿ ಕಮಲಾಕ್ಷ ಪೂಜಾರಿಯವರ ದ್ವಿತೀಯ ಪುತ್ರಿ ವಿನುತಾ ತನ್ನ ವಿವಾಹ ಸುಮೂರ್ತದ ಮೊದಲು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.