ಡೈಲಿ ವಾರ್ತೆ: 28/ಮೇ /2024
ರಸ್ತೆಯಲ್ಲಿ ಸಿಕ್ಕ 2.5 ಲಕ್ಷ ರೂ. ಹಣದ ಬ್ಯಾಗನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಮದರಸದ ಮುಸ್ಲಿಯಾರ್
ಬಂಟ್ವಾಳ : ಇಲ್ಲಿನ ಕೆಳಗಿನ ಪೇಟೆಯ ಕೇಂದ್ರ ಜುಮಾ ಮಸೀದಿಯ ಬಳಿ ರಸ್ತೆಯಲ್ಲಿ ಬಿದ್ದಿದ್ದ ನಗದು ತುಂಬಿದ್ದ ಬ್ಯಾಗನ್ನು ಸ್ಥಳೀಯ ಮದರಸದ ಮುಖ್ಯ ಶಿಕ್ಷಕರು ಅದರ ವಾರೀಸುದಾರರಿಗೆ ಹಿಂದಿರುಗಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿರುವುದು ವರದಿಯಾಗಿದೆ.
ಬಂಟ್ವಾಳ ನಿವಾಸಿ ಉದ್ಯಮಿ ಶ್ರೀಪತಿ ಶ್ರೀಕಾಂತ್ ಭಟ್ ಅವರು ಮಂಗಳವಾರ ಬೆಳಿಗ್ಗೆ ಬೈಕ್ ನಲ್ಲಿ ಬಂಟ್ವಾಳದಿಂದ ಬಿ.ಸಿ. ರೋಡಿಗೆ ಹೋಗುತ್ತಿದ್ದ ವೇಳೆ ಬಂಟ್ವಾಳ ಕೆಳಗಿನ ಪೇಟೆಯ ಕೇಂದ್ರ
ಜುಮಾ ಮಸೀದಿ ಬಳಿ ರೂಪಾಯಿ 2.43 ಲಕ್ಷ ತುಂಬಿದ್ದ ಬ್ಯಾಗ್ ರಸ್ತೆಯಲ್ಲಿ ಬಿದ್ದಿತ್ತು. ಇಲ್ಲಿನ ಮನಾರುಲ್ ಇಸ್ಲಾಂ ಮದ್ರಸದ ಮುಖ್ಯ ಶಿಕ್ಷಕ ಮಜೀದ್ ಫೈಝಿ ಹಾಗೂ ಶಿಕ್ಷಕ ಆದಂ ಮದನಿ ಅವರು ತರಗತಿ ಮುಗಿದ ಬಳಿಕ ವಿದ್ಯಾರ್ಥಿಗಳನ್ನು ರಸ್ತೆ ದಾಟಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಬ್ಯಾಗೊಂದು ಬಿದ್ದು ಕಂಡಿದ್ದು ಅದನ್ನು ನೋಡಿದಾಗ ನಗದು ತುಂಬಿತ್ತು. ಅದನ್ನು ಜೋಪಾನವಾಗಿ ಇರಿಸಿಕೊಂಡ ಅವರು ನನಗೊಂದು ನಗದು ತುಂಬಿದ ಬ್ಯಾಗ್ ರಸ್ತೆಯಲ್ಲಿ ಸಿಕ್ಕಿರುತ್ತದೆ, ಕಳೆದುಕೊಂಡವರು ಇದ್ದಲ್ಲಿ ನನ್ನನ್ನು ಸಂಪರ್ಕಿಸಲಿ ಎಂದು ಸ್ಥಳೀಯರಿಗೆ ಮಾಹಿತಿ ನೀಡಿದ್ದರು.
ಕೆಲ ಸಮಯದ ಬಳಿಕ ಅದೇ ದಾರಿಯಲ್ಲಿ ಶ್ರೀಪತಿ ಶ್ರೀಕಾಂತ್ ಭಟ್ ಅವರು ಹುಡುಕುತ್ತಾ ಬರುವುದನ್ನು ನೋಡಿದ ಸ್ಥಳೀಯರು ವಿಚಾರಿಸಿದಾಗ ಬ್ಯಾಗ್ ಕಳೆದು ವಿಚಾರ ತಿಳಿಸಿದರು.
ಬ್ಯಾಗ್ ಸಿಕ್ಕಿರುವ ವಿಷಯ ಅವರಿಗೆ ತಿಳಿಸಿ, ಅದರ ಗುರುತು ಮತ್ತು ನಗದನ್ನು ಪರಿಶೀಲಿಸಿ ಅದರ ವಾರೀಸುದಾರರಾದ ಶ್ರೀಪತಿ ಶ್ರೀಕಾಂತ್ ಭಟ್ ಅವರಿಗೆ ಮಸೀದಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಅವರ ಸಮ್ಮುಖದಲ್ಲಿ ಮರಳಿಸಲಾಯಿತು.
ಉಸ್ತಾದರುಗಳ ಪ್ರಾಮಾಣಿಕಕತೆಗೆ ಶ್ರೀಪತಿ ಶ್ರೀಕಾಂತ್ ಭಟ್, ಮಸೀದಿ ಆಡಳಿತ ಸಮಿತಿ ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.