ಡೈಲಿ ವಾರ್ತೆ: 19/ಜೂ./2024

ಚಿಕ್ಕಮಗಳೂರು: ತೆಪ್ಪ ಮುಳುಗಿ ಮೂವರು ಪ್ರವಾಸಿಗರು ದುರ್ಮರಣ

ಚಿಕ್ಕಮಗಳೂರು: ತೆಪ್ಪ ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿಗಳು ಶಿವಮೊಗ್ಗ ಜಿಲ್ಲೆಯ ವಿದ್ಯಾನಗರ ಮೂಲದವರಾದ ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಎಂದು ಗುರುತಿಸಲಾಗಿದೆ.

ಈ ಮೂವರು ಪ್ರವಾಸಿಗರು ಭದ್ರಾ ನದಿಯ ಬ್ಯಾಕ್ ವಾಟರ್‌ನಲ್ಲಿ ತೆಪ್ಪದಲ್ಲಿ ಹೋಗಿದ್ದರು. ಈ ವೇಳೆ ತೆಪ್ಪ ಮುಳುಗಿ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ವನ್ಯಜೀವಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಎನ್.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.