ಡೈಲಿ ವಾರ್ತೆ: 26/ಜುಲೈ /2024
ಬಂಟ್ವಾಳ ಪೊಲೀಸರಿಂದ ಜುಗಾರಿ ಅಡ್ಡೆಗೆ ದಾಳಿ – ಮೂವರ ಬಂಧನ, ಓರ್ವ ಪರಾರಿ
ಬಂಟ್ವಾಳ : ಮನೆಯೊಂದರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸರು ಆರೋಪಿಗಳ ಸಹಿತ ಆಟಕ್ಕೆ ಬಳಸಿದ ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಪಿಲಿಮೊಗ್ರು ಗ್ರಾಮದ ನಡಾಯಿ ಎಂಬಲ್ಲಿ ನಡೆದಿದೆ.
ಬಂಧಿತರನ್ನು ಶಿವರಾಮ ನಾಯಕ್ (56), ಗೋಪಾಲ (41), ಯೋಗೀಶ ಪ್ರಭು, (46) ಎಂದು ಹೆಸರಿಸಲಾಗಿದ್ದು, ಜಯಣ್ಣ ಅಲಿಯಾಸ್ ಜಯಚಂದ್ರ ಬೊಳ್ಳಾರ್ ಎಂಬಾತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಜಯಚಂದ್ರ ಬೊಳ್ಳಾರ್ ಎಂಬಾತನ ಒಡೆತನದ ಮನೆಯೊಳಗೆ ಅಕ್ರಮವಾಗಿ ಜುಗಾರಿ ಅಡ್ಡೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತೃತ್ವದ ಪೊಲೀಸರು ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿ ವೇಳೆ ಸ್ಥಳದಲ್ಲಿ ದೊರೆತ 28,120/- ರೂಪಾಯಿ ನಗದು ಸಹಿತ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.