ಡೈಲಿ ವಾರ್ತೆ: 18/Sep/2024

ಬೆಳಗಾವಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹಿಂಸಾಚಾರ: ದುಷ್ಕರ್ಮಿಗಳಿಂದ ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿತ, ಆರೋಪಿಗಳ ಬಂಧನ

ಬೆಳಗಾವಿ, ಸೆ. 18: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹಿಂಸಾಚಾರ ನಡೆದಿದ್ದು, ಮೂವರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ.

ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಘಟನೆ ನಡೆದಿದೆ. ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ಕಾಲು ತಾಗಿದ್ದಕ್ಕೆ ಕಿರಿಕ್ ಮಾಡಿ ವಿದ್ಯಾರ್ಥಿಗಳ ಹೊಟ್ಟೆ, ಕತ್ತು, ಬೆನ್ನಿನ ಭಾಗಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಬೆಳಗಾವಿಯ ಚರ್ಚ್ ಗಲ್ಲಿಯ ಯುವಕರ ಗ್ಯಾಂಗ್ ನಿಂದ ನಿನ್ನ ಕೃತ್ಯ ನಡೆದಿದೆ ಎನ್ನಲಾಗಿದೆ.

ಸಮಾಜ ಕಲ್ಯಾಣ ವಸತಿ ನಿಲಯದ ಮೂವರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಪ್ರವೀಣ್ ಗುಂಡ್ಯಾಗೋಳ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಶನ್ ಪಾಟೀಲ್, ಸತೀಶ್ ಪೂಜಾರಿಗೆ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಗಳನ್ನು ಚೇಸ್ ಮಾಡಿ ಬಂಧಿಸಿದ ಪೊಲೀಸರು: ಚಾಕು ಇರಿದು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಎಪಿಎಂಸಿ ಠಾಣೆಯ ಪೊಲೀಸರು ಬೆನ್ನು ಹತ್ತಿ ಚೇಸ್ ಮಾಡಿ ಹಿಡಿದಿದ್ದಾರೆ. ಆರೋಪಿಗಳು ಗಾಂಜಾ ಮತ್ತಿನಲ್ಲಿ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ವಶಕ್ಕೆ ಪಡೆದ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆ ಬೆಳಗಾವಿ ಎಪಿಎಂಸಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.