ಡೈಲಿ ವಾರ್ತೆ: 19/OCT/2024

ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ – ತುರ್ತು ಭೂಸ್ಪರ್ಶ

ನವದೆಹಲಿ: ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ವಿಸ್ತಾರ UK17 ವಿಮಾನವು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ತಪಾಸಣೆ ನಡೆಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ಶನಿವಾರ ಮುಂಜಾನೆ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಪರಿಶೀಲಿಸಿದ ಬಳಿಕ ವಿಮಾನ ಗಮ್ಯಸ್ಥಾನಕ್ಕೆ ತೆರಳಲಿದೆ ಎಂದೂ ಅವರು ಹೇಳಿದ್ದಾರೆ.

ಅಕ್ಟೋಬರ್ 18 ರಂದು (ಶುಕ್ರವಾರ) ದೆಹಲಿಯಿಂದ
ಲಂಡನ್‌ಗೆ ತೆರಳುತ್ತಿದ್ದ ವಿಸ್ತಾರ ವಿಮಾನ UK17ಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಲಾಗಿದೆ.
ಶಿಷ್ಠಾಚಾರದ ಪ್ರಕಾರ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ, ಪೈಲಟ್‌ಗಳು ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ಮಾರ್ಗ
ಬದಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ, ಭಾರತೀಯ ವಿಮಾನ ಸಂಸ್ಥೆಗಳು ನಿರ್ವಹಿಸುವ ಸುಮಾರು 40 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಬಳಿಕ ಅವು ಹುಸಿ ಸಂದೇಶ ಎಂಬುದು ಬಹಿರಂಗಗೊಂಡಿವೆ.

ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆಯ ಘಟನೆಗಳನ್ನು ತಡೆಗಟ್ಟಲು ‘ನೋ ಪ್ಲೈ ಲಿಸ್ಟ್’ ಸೇರಿದಂತೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರಲು ನಾಗರಿಕ ವಿಮಾನಯಾನ ಸಚಿವಾಲಯವು ಯೋಜಿಸಿದೆ.