ಡೈಲಿ ವಾರ್ತೆ: 30/OCT/2024

ಮಹಾಲಕ್ಷ್ಮೀ ಕೋ. ಆಪರೇಟಿವ್ ಬ್ಯಾಂಕ್ ಹಗರಣದ ಬಗ್ಗೆ ತನಿಖೆಗೆ ಮಾಜಿ ಶಾಸಕ ಕೆ.ರಘುಪತಿ ಭಟ್ ಆಗ್ರಹ

ಉಡುಪಿ: ಮಹಾಲಕ್ಷ್ಮೀ ಕೋ. ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ 20 ಸಾವಿರ ರೂ. ಸಾಲ ಪಡೆದ ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ತಲಾ 2 ಲಕ್ಷ ರೂ.ನಂತೆ ಒಟ್ಟು 28.26 ಕೋಟಿ ರೂ. ಮೊತ್ತ ಅಕ್ರಮದ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಸೂಕ್ತ ತನಿಖೆ ನಡೆಸುವಂತೆ ಮಾಜಿ ಶಾಸಕ ಕೆ.ರಘುಪತಿ ಭಟ್ ಆಗ್ರಹಿಸಿದ್ದಾರೆ.

ಈ ಸಾಲದಿಂದಾಗಿ ಅವರಿಗೆ ಇತರ ಶೈಕ್ಷಣಿಕ ಸಾಲ, ಗೃಹ ಸಾಲ ಅಥವಾ ವ್ಯವಹಾರದ ಸಾಲಕ್ಕೆ ಬೇರೆ ಬ್ಯಾಂಕ್ಗಳಿಗೆ ಹೋದಾಗ ಮಹಾಲಕ್ಷ್ಮಿ ಕೋ. ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ದಾಖಲಾಗಿರುವ 2 ಲಕ್ಷ ರೂ. ಸಾಲದಿಂದಾಗ ಸಾಲ ಪಡೆಯಲು ಸಿಬಿಲ್ ಸಮಸ್ಯೆಯಾಗುತ್ತಿರುವುದಾಗಿ ಗ್ರಾಹಕರು ದೂರಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.

ಮಹಾಲಕ್ಷ್ಮಿ ಕೋ. ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ 20 ಸಾವಿರ ರೂ. ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕಿನವರು 2 ಲಕ್ಷ ರೂ. ಸಾಲ ಪಾವತಿಸಲು ಮನೆಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನೊಂದ ಸಂತ್ರಸ್ತ ಗ್ರಾಹಕರು ತಮಗೆ ನ್ಯಾಯಕೊಡಿಸುವಂತೆ ಹಾಗೂ ಈ ಬಗ್ಗೆ ಸಂಬಂದಪಟ್ಟವ ರಿಂದ ಸೂಕ್ತ ತನಿಖೆ ನಡೆಸಿ ನಾವು ಪಡೆಯದ ಸಾಲದಿಂದ ನಮ್ಮನ್ನು ಮುಕ್ತರನ್ನಾಗಿಸುವಂತೆ ನನಗೆ ಮನವಿ ನೀಡಿದ್ದಾರೆ ಎಂದರು.

ಆದ್ದರಿಂದ ಬೇನಾಮಿ ಸಾಲದ ಅಕ್ರಮ ಎಸಗಿರುವುದು ಅತಿದೊಡ್ಡ ಹಗರಣವಾಗಿದೆ. ಈ ವಿಷಯದಲ್ಲಿ ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಈ ಅಕ್ರಮದ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಸೂಕ್ತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಅನ್ಯಾಯಕ್ಕೆ ಒಳಗಾದ ಸಂತ್ರಸ್ತ ಗ್ರಾಹಕರನ್ನು ಸಾಲ ಮುಕ್ತರನ್ನಾಗಿಸಬೇಕು ಎಂದು ರಘುಪತಿ ಭಟ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಮಾಣ ಮಾಡಲಿ:
ಮಹಾಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಎಸಗಿರುವ ಕುರಿತು ಆಧಾರರಹಿತ ಆರೋಪ ಮಾಡಿದ ಮಾಜಿ ಶಾಸಕ ರಘುಪತಿ ಭಟ್, ತಮ್ಮ ಆರೋಪವನ್ನು ಸಾಬೀತು ಮಾಡಲು ಉಡುಪಿ ಕೃಷ್ಣ ಮಠ ಅಥವಾ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಪ್ರಮಾಣ ಮಾಡುವಂತೆ ಕೋರಿ ಬ್ಯಾಂಕಿನ ಸಿಬ್ಬಂದಿಗಳು ಪತ್ರ ಬರೆದು ಮನವಿ ಮಾಡಿದ್ದಾರೆ.

ಸಮಾಜದ ಜವಾಬ್ದಾರಿಯುತ ವ್ಯಕ್ತಿಯಾಗಿರುವ ರಘುಪತಿ ಭಟ್, ಬ್ಯಾಂಕ್ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ನಡೆದಿರುವುದಾಗಿ ತಮ್ಮ ಆಧಾರರಹಿತ ಹೇಳಿಕೆ ತೀವ್ರ ಆಘಾತ ತಂದಿದೆ. ಬ್ಯಾಂಕಿನ ವಿರುದ್ಧ ಅಪಪ್ರಚಾರ ನಿರತ ವ್ಯಕ್ತಿಗಳ ಜೊತೆಗೂಡಿ ಸ್ವಲ್ಪವೂ ವಿಚಾರ ವಿಮರ್ಶೆ ಮಾಡದೇ ಬ್ಯಾಂಕಿನ ವಿರುದ್ಧ ಸುಳ್ಳು ಆರೋಪ ಮಾಡಿರುವುದು ದುರದೃಷ್ಟಕರ. ನಿಮ್ಮ ಈ ಹೇಳಿಕೆಯಿಂದ ಬ್ಯಾಂಕಿನ ಸಿಬ್ಬಂದಿಗೆ ತೀವ್ರ ಬೇಸರವಾಗಿದೆ. ಸಿಬ್ಬಂದಿಗಳ ಘನತೆಗೆ ಈ ಸುಳ್ಳು ಆರೋಪದಿಂದ ಧಕ್ಕೆಯಾಗಿದ್ದು, ತಾವು ನಮ್ಮ ಬ್ಯಾಂಕ್ ಮೇಲೆ ತಾವು ಮಾಡಿರುವ ಆರೋಪವನ್ನು ಖಡಾಖಂಡಿತವಾಗಿ ನಿರಾಕರಿಸುತ್ತಿದ್ದೇವೆ ಹಾಗೂ ಈ ಬಗ್ಗೆ ಯಾವುದೇ ಉನ್ನತ ಮಟ್ಟದ ತನಿಖೆಗೂ ಬದ್ಧರಾಗಿದ್ದೇವೆ ಎಂದು ಹೇಳಿಕೆಯಲ್ಲಿ ಬ್ಯಾಂಕಿನ ಸಿಬ್ಬಂದಿಗಳು ತಿಳಿಸಿದ್ದಾರೆ.