ಡೈಲಿ ವಾರ್ತೆ: 07/JAN/2025
ಏಮಾಜೆ : ಸರಕಾರಿ ಕಿರಿಯ ಪ್ರಾಥಮಿಕ ಶಾಲಾ “ಪ್ರತಿಭಾ ಪುರಸ್ಕಾರ “ಹಾಗೂ “ಅಕ್ಷರ ರತ್ನ ” ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ – ಜಗತ್ತಿನ ಅಂದಕಾರವನ್ನು ಹೋಗಲಾಡಿಸುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ… ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ
ಬಂಟ್ವಾಳ : ಜಗತ್ತಿನ ಅಂಧ ಕಾರವನ್ನು ಹೋಗಲಾಡಿಸುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಹೇಳಿದರು.
ಬಂಟ್ವಾಳ ತಾಲೂಕು, ನೆಟ್ಲ ಮುಡ್ನೂರು ಗ್ರಾಮದ ಏಮಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಶ್ರೀದೇವಿ ಗೆಳೆಯರ ಬಳಗ ಇದರ ಆಶ್ರಯದಲ್ಲಿ ನಡೆದ 2024 -25 ನೇ ಸಾಲಿನ “ಪ್ರತಿಭಾ ಪುರಸ್ಕಾರ” ಹಾಗೂ “ಅಕ್ಷರ ರತ್ನ “ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ಶಿಕ್ಷಕರಲ್ಲಿ ತಾಯಿಯ ಮಮತೆಯನ್ನು ಹೊಂದಿರುವಂತಹ ವಾತ್ಸಲ್ಯ ಗುಣವಿರಬೇಕು ಆಗ ಮಗು ಆಸಕ್ತಿಯಿಂದ ಕಲಿಯುತ್ತದೆ.
ತನ್ನೆಲ್ಲ ಉತ್ತಮ ವಿಚಾರಗಳನ್ನು ಮಗುವಿಗೆ ಧಾರೆಯೆರೆಯುವ ಮೂಲಕ ಮಗುವನ್ನು ಮಾನವೀಯ ಮೌಲ್ಯಯುತವಾದ ಸತ್ಪ್ರಜೆಯನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ, ಇದಕ್ಕೆ ಜೊತೆಯಾಗಿ ನಿಲ್ಲಬೇಕಾಗಿರುವುದು ಪೋಷಕರ ಕರ್ತವ್ಯವಾಗಿದೆ. ಮಗುವಿಗೆ ಎಲ್ಲರೊಳಗೆ ಒಂದಾಗಿ ಸಂಸ್ಕಾರಯುತ ಜೀವನವನ್ನು ಸಾಗಿಸುವ ಗುಣಗಳನ್ನು ಬೆಳೆಸುವಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ತರವಾದದ್ದು.
ಶಿಕ್ಷಣದ ಸೌಲಭ್ಯಗಳಲ್ಲಿ ಏನೇ ಸಮಸ್ಯೆಗಳಿದ್ದರೂ ಅದನ್ನು ಶಾಲೆಯ ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವ ಮೂಲಕ ಊರಿನ ವಿದ್ಯಾಭಿಮಾನಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಶೈಕ್ಷಣಿಕ ವಿಚಾರಗಳಿಗಾಗಿ ಯಾವುದೇ ಭೇದ ಭಾವವನ್ನು ತೋರದೆ ಒಂದಾಗಿ ಒಗ್ಗಟ್ಟಿನಲ್ಲಿ ಕಾರ್ಯರೂಪಕ್ಕೆ ತರುವ ಕಾರ್ಯಕ್ರಮಗಳು ಅಭಿವೃದ್ಧಿಗೆ ಬಹಳಷ್ಟು ಸಹಾಯವಾಗುತ್ತದೆ. ಯಾರು ತ್ಯಾಗಮಯಿಯಾಗಿ ಶೈಕ್ಷಣಿಕ ವಿಚಾರಗಳಿಗಾಗಿ ಸೇವೆಯನ್ನು ಮಾಡುತ್ತಾರೋ ಅವರಿಗೆ ದೇವರ ಅನುಗ್ರಹ ಸದಾ ಇರುತ್ತದೆ ಎಂದರು.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ. ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನೆಟ್ಲಮುಡ್ನೂರು ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ, ಸದಸ್ಯರುಗಳಾದ ಧನಂಜಯ ಗೌಡ, ಶಕೀಲಾ ಕೆ.ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯ, ಉಪಾಧ್ಯಕ್ಷ ಪ್ರಸಾದ್ ಆಚಾರ್ಯ, ಸಹ ಶಿಕ್ಷಕ ವೆಂಕಟೇಶ್ ಅನಂತಾಡಿ, ನಿವೃತ್ತ ಪ್ರಾಂಶುಪಾಲ ಜಯರಾಮ್ ರೈ, ಮಾಣಿ ಕ್ಲಸ್ಟರ್
ಸಿ.ಆರ್.ಪಿ ಸತೀಶ್ ರಾವ್, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಸಲಹೆಗಾರ ರಝಾಕ್ ಗುಲ್ಜಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಶಾಲೆಯ ಪ್ರಗತಿಗೆ ಸೇವೆ ಸಲ್ಲಿಸಿದ 7 ನಿಕಟ ಪೂರ್ವ ಅಧ್ಯಕ್ಷರುಗಳನ್ನು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಅವರನ್ನು ಅಭಿನಂದಿಸಲಾಯಿತು. ಶಾಲಾ ವತಿಯಿಂದ ಸದರಿ ವರ್ಷದಿಂದ ಪ್ರಾರಂಭಿಸಲಾದ “ಅಕ್ಷರ ರತ್ನ” ಪ್ರಶಸ್ತಿಯನ್ನು ಸರಕಾರಿ ಶಾಲೆಗಳ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಚಿನ್ನಾ ಕಲ್ಲಡ್ಕ ಇವರಿಗೆ ನೀಡಲಾಯಿತು. ಶಾಲಾ ಅಭಿವೃದ್ಧಿಯಲ್ಲಿ ವಿಶೇಷ ಮುತುವರ್ಜಿ ವಹಿಸುತ್ತಿರುವ ಶಾಲಾ ಮುಖ್ಯ ಶಿಕ್ಷಕಿ ಡಾ.ತ್ರಿವೇಣಿ ರಮೇಶ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ಶೆಟ್ಟಿ ರವರನ್ನು ಗೌರವಿಸಲಾಯಿತು. ಶಾಲೆಯ ಅಭಿವೃದ್ಧಿಯಲ್ಲಿ ವಿಶೇಷವಾಗಿ ಸಹಕರಿಸುತ್ತಿರುವ ಸಂಘ ಸಂಸ್ಥೆ ಹಾಗೂ ಮಹನೀಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರದ ನಿಮಿತ್ತ ಶಾಲಾ ಮಕ್ಕಳಿಗೆ ಕಲಿಕೆ, ಆಟೋಟಗಳಲ್ಲಿ ವಿಶೇಷ ಸಾಧನೆಗೈದ ಕರಾಟೆ ಪಟು ಹಾಗೂ ಪ್ರತಿಭಾ ಕಾರಂಜಿ ಸ್ಪರ್ಧಾ ವಿಜೇತರಿಗೆ , ಅತ್ಯುತ್ತಮ ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸನ್ಮಾನ, ಹಳೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ಮೊದಲು ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ, ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಮಾರಿ ಪ್ರಗತಿ ನಿರ್ದೇಶನದಲ್ಲಿ ಮಕ್ಕಳಿಂದ “ನವಶಕ್ತಿ ವೈಭವ” ನೃತ್ಯ ಪ್ರದರ್ಶನಗೊಂಡಿತು ಕಾರ್ಯಕ್ರಮದ ನಿಮಿತ್ತ ಸಾರ್ವಜನಿಕ ಅನ್ನದಾನ ಏರ್ಪಡಿಸಲಾಗಿತ್ತು.
ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಸ್ವಾಗತಿಸಿದರು. ಸಹ ಶಿಕ್ಷಕ ಉದಯ ಚಂದ್ರ ಕೆ.ಎಸ್ ಶಾಲಾ ವರದಿ ವಾಚಿಸಿ, ಶಿಕ್ಷಕಿ ದೀಕ್ಷಾ ಬಹುಮಾನಿತರ ಪಟ್ಟಿ ವಾಚಿಸಿದರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ಶೆಟ್ಟಿ ವಂದಿಸಿ, ಅತಿಥಿ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯಶ್ವಿತ ಸಹಕರಿಸಿದರು.