ಡೈಲಿ ವಾರ್ತೆ: 08/JAN/2025
ವಿಮೆ ಹಣಕ್ಕಾಗಿ ತಂದೆಯನ್ನೇ ಕೊಲೆ ಮಾಡಿದ ಪುತ್ರ – ನಾಲ್ವರ ಬಂಧನ
ಕಲಬುರಗಿ: ವಿಮೆ ಹಣಕ್ಕಾಗಿ ಸ್ವಂತ ತಂದೆಯನ್ನೇ ಕೊಲೆ ಮಾಡಿಸಿದ ಮಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಮಾಡಬೂಳ ಪೊಲೀಸರು ಸೆರೆ ಹಿಡಿದಿದ್ದಾರೆ.
ಕಾಳಿಂಗರಾಯ್ ಕೊಲೆಯಾದ ತಂದೆ. ಕಾಳಿಂಗರಾಯ್ ಅವರ ಪುತ್ರ ಸತೀಶ್ ಮತ್ತು ಇತರೆ ಆರೋಪಿಗಳಾದ ಅರುಣ್, ಯುವರಾಜ್ ಹಾಗೂ ರಾಕೇಶ್ ಬಂಧಿತರು.
ಪ್ರಕರಣದ ವಿವರ: ಕಾಳಿಂಗರಾಯ್ ಅವರು ಕಲಬುರಗಿ ನಗರದ ಆದರ್ಶ್ ಕಾಲೊನಿಯ ತಮ್ಮ ನಿವಾಸದಲ್ಲಿ ವಾಸವಾಗಿದ್ದರು. ಇವರಿಗೆ ಮೂವರು ಮಕ್ಕಳು. ಈ ಪೈಕಿ ಸತೀಶ್ ಎಂಬಾತ ಅದೇ ಕಾಲೊನಿಯಲ್ಲಿ ಹೋಟೆಲ್ ನಡೆಸುತ್ತಿದ್ದ. ಮನೆ ಕಟ್ಟಲು, ಸಹೋದರಿಯರ ಮದುವೆಗಾಗಿ ಸತೀಶ್ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಪ್ರತಿದಿನ ಹೋಟೆಲ್‌ಗೆ ಬರುತ್ತಿದ್ದ ಅರುಣ್ ಎಂಬಾತನ ಜೊತೆಗೆ ಸತೀಶನಿಗೆ ಸ್ನೇಹ ಬೆಳೆದಿತ್ತು. ತನ್ನ ಸಾಲದ ವಿಚಾರವನ್ನು ಸತೀಶ್, ಅರುಣ್ ಜೊತೆ ಹಂಚಿಕೊಂಡಿದ್ದ. ಆಗ ಅರುಣ್, ನಿಮ್ಮ ತಂದೆಯ ಹೆಸರಿನ ಮೇಲೆ ಎರಡು ಇನ್ಶೂರೆನ್ಸ್ ಮಾಡಿಸು ಅಂತಾ ಸಲಹೆ ಕೊಟ್ಟಿದ್ದಾನೆ. ಅದರಂತೆ ಸತೀಶ್ ತನ್ನ ತಂದೆಯ ಹೆಸರಿನ ಮೇಲೆ 22 ಲಕ್ಷ ಮತ್ತು 5 ಲಕ್ಷದ ಎರಡು ಇನ್ಶೂರೆನ್ಸ್ ಮಾಡಿಸಿದ್ದಾನೆ. ಬಳಿಕ ಅರುಣ್, ನಿಮ್ಮ ತಂದೆ ಇದ್ರೂ ಏನೂ ಪ್ರಯೋಜನವಿಲ್ಲ. ಹಾಗಾಗಿ ತಂದೆಯನ್ನು ಅಪಘಾತದ ರೂಪದಲ್ಲಿ ಕೊಲೆ ಮಾಡೋಣ. ನನಗೆ ಮೂರು ಲಕ್ಷ ರೂಪಾಯಿ ಕೊಡು ಎಂದು ಡೀಲ್ ಮಾಡಿಕೊಳ್ತಾನೆ.
ಈ ಡೀಲ್‌ಗೆ ಒಪ್ಪಿದ ಸತೀಶ್, ಕಳೆದ ವರ್ಷ ಜುಲೈ 8ರಂದು ತಂದೆ ಕಾಳಿಂಗರಾಯರನ್ನು ಬೈಕ್‌ನಲ್ಲಿ ಕೂರಿಸಿ ಆದರ್ಶ್ ನಗರದಿಂದ ಬೆಣ್ಣೂರು ಗ್ರಾಮಕ್ಕೆ, ಸಾಲ ತರೋದಿದೆ ಬಾ ಎಂದು ಕರೆದುಕೊಂಡು ಹೋಗ್ತಾನೆ. ಬೆಣ್ಣೂರು ಕ್ರಾಸ್ ಬಳಿ ಮೂತ್ರವಿಸರ್ಜನೆ ಎಂದು ನಾಟಕವಾಡಿ ಬೈಕ್ ನಿಲ್ಲಿಸಿ ಹೋಗ್ತಾನೆ. ಬಳಿಕ ಬೈಕ್ ಬಳಿ ನಿಂತಿದ್ದ ತಂದೆ ಕಾಳಿಂಗರಾಯ್ ಮೇಲೆ ಟ್ರ್ಯಾಕ್ಟರ್ ಹಾಯಿಸುತ್ತಾರೆ. ಇದರಿಂದ ಕಾಳಿಂಗರಾಯ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.
ನಂತರ ತಂದೆಯ ಬಳಿಗೆ ಬಂದ ಸತೀಶ್, ಅರುಣ್ ಕೈಯಿಂದ ಕಲ್ಲಿನಲ್ಲಿ ತಲೆಗೆ ಹೊಡೆಸಿಕೊಂಡು ಗಂಭೀರ ಗಾಯ ಮಾಡಿಕೊಂಡಿದ್ದ. ಬಳಿಕ ನೇರವಾಗಿ ಮಾಡಬೂಳ ಠಾಣೆಗೆ ಹೋಗಿದ್ದ ಸತೀಶ್, “ನಾವು ಬೈಕ್‌ನಲ್ಲಿ ಹೋಗ್ತಿರುವಾಗ ಯಾರೋ ಒಬ್ಬ ಟ್ರ್ಯಾಕ್ಟರ್‌ನಿಂದ ಗುದ್ದಿದ್ದು, ನಮ್ಮ ತಂದೆ ಕಾಳಿಂಗರಾಯ್ ಮೃತಪಟ್ಟರು ಎಂದು ಸುಳ್ಳು ಕಥೆ ಹೇಳಿದ್ದಾನೆ.
ಸತೀಶನ ಮಾತು ನಂಬಿದ ಮಾಡಬೂಳ ಪೊಲೀಸರು ತನಿಖೆಗೆ ಇಳಿಯುತ್ತಾರೆ. ಕೊಲೆಗೆ ಯೋಜನೆ ರೂಪಿಸಿದ್ದ ಅರುಣ್ಗೆ ಸತೀಶ್, ಒಂದು ಇನ್ಶೂರೆನ್ಸ್ ಕ್ಲೈಮ್ನಿಂದ ಬಂದಿದ್ದ 5 ಲಕ್ಷ ರೂ ಹಣದಲ್ಲಿ ತನ್ನ ತಾಯಿಯ ಫೋನ್ ಪೇ ಮೂಲಕ 3 ಲಕ್ಷ ರೂಪಾಯಿ ಹಾಕಿದ್ದ. ಆದರೆ ಪೊಲೀಸರು ವಿಚಾರಣೆ ನಡೆಸಿದಾಗ ಸತೀಶ್ ವ್ಯತಿರಿಕ್ತ ಹೇಳಿಕೆ ನೀಡಿದ್ದಾನೆ. ಇತ್ತ ಅರುಣ್ ಅಕೌಂಟ್ಗೆ 3 ಲಕ್ಷ ಹಣ ಹಾಕಿದ್ದರ ಬಗ್ಗೆ ಪೊಲೀಸರಿಗೆ ತಿಳಿದು ನಂತರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಂದಿದೆ. ಪೊಲೀಸರ ಮುಂದೆ ಸತೀಶ್ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
“ಕಾಳಿಂಗರಾಯ್ ಕಷ್ಟಪಟ್ಟು ದುಡಿದು ತನ್ನ ಮಕ್ಕಳ ಬದುಕು ರೂಪಿಸಿದ್ದರು. ಆದರ್ಶ ನಗರದಲ್ಲಿ ಹೋಟೆಲ್ ನಡೆಸಿಕೊಂಡಿದ್ದ ಸತೀಶ್ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೇ ಮನೆಯನ್ನೂ ಮಾರಾಟ ಮಾಡಿದ್ದ” ಎಂದು ಕೊಲೆಯಾದ ಕಾಳಿಂಗರಾಯ್ ಸಹೋದರ ದತ್ತು ಹೇಳಿದ್ದಾರೆ.
ಪ್ರಕರಣ ಬೇಧಿಸಿದ ಶಹಬಾದ್ ಡಿವೈಎಸ್ಪಿ ಶಂಕರಗೌಡ, ಮಾಡಬೂಳ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿಗೆ ಎಸ್ಪಿ ಅಡ್ಡೂರು ಶ್ರೀನಿವಾಸುಲು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.