ಡೈಲಿ ವಾರ್ತೆ: 20/JAN/2025

ನ್ಯಾಯಾಲಯಕ್ಕೆ ಹಾಜರಾಗದೆ 10 ವರ್ಷದಿಂದ ತಲೆ ಮರೆಸಿಕೊಂಡ ಆರೋಪಿ ಬಂಧನ !

ವರದಿ: ವಿದ್ಯಾಧರ ಮೊರಬಾ


ಅಂಕೋಲಾ : ಇಲ್ಲಿನ ನ್ಯಾಯಾಲಯಕ್ಕೆ ಹಾಜರಾಗದೇ ಕಳೆದ 10 ವರ್ಷಗಳಿಂದ ತಲೆ ಮರೆಸಿಕೊಂಡ ಕೇರಳ ಮೂಲದ ಆರೋಪಿಯೊಬ್ಬನನ್ನು ಅಂಕೋಲಾ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಶನಿವಾರ ನಡೆದಿದೆ.

ಕೇರಳದ ರಾಜ್ಯ ಎರ್ನಾಕುಲಂ ನಿವಾಸಿ ಇ.ಪಿ. ಪುರುಷೋತ್ತಮ ಇ.ವಿ ಇತನೇ ಬಂಧಿತ ಆರೋಪಿ. ಈತ ಲಾರಿ ಚಾಲಕನಾಗಿರುತ್ತಾನೆ.

ಘಟನೆ: ತಾಲೂಕಿನ ರಾಮನಗುಳಿಯಲ್ಲಿ 2014 ಅಕ್ಟೋಬರ್ 19 ರಂದು ಸಂಜೆ ವೇಳೆಯಲ್ಲಿ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿ ಪುಷ್ಪಾ ಸೋಮಯ್ಯ ಗೌಡ (18), ನಂದೇಶ ಶಿವಾನಂದ ಗೌಡ (6) ಇವರ ಮೇಲೆ ಲಾರಿ ಹಾಯ್ದು ಸಾವನ್ನೊಪ್ಪಿರುವ ಘಟನೆಯಲ್ಲಿ ಲಾರಿ ಚಾಲಕ ಕೇರಳದ ಎರ್ನಾಕುಲಂ ನಿವಾಸಿ ಪುರುಷೋತ್ತಮ 307 ಆರೋಪಿಯಾಗಿರುತ್ತಾನೆ. ಆತನ ವಿರುದ್ದ ಅಂದಿನ ಪಿಐ ಗಣೇಶ ಹೆಗಡೆ ಮತ್ತು ಪಿಎಸ್‌ಐ ನಾಗೇಂದ್ರ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದರು.

ವಾರೆಂಟ ಜಾರಿ: ಅಂಕೋಲಾ ನ್ಯಾಯಾಲಯ ಆರೋಪಿ ಬಂಧನಕ್ಕಾಗಿ ಸುಮಾರು 80ಕ್ಕೂ ಹೆಚ್ಚು ಬಾರಿ ವಾರೆಂಟ ಹೊರಡಿಸಿತ್ತು. ಆದರೆ ಅಂಕೋಲಾ ಪೊಲೀಸರು ಅನೇಕ ಬಾರಿ ವಾರೆಂಟ ಪಡೆದು ಆತನ ಮನೆಗೆ ಹೋದ ಸಂದರ್ಭದಲ್ಲಿ ಆತನ ಪತ್ತೆ ಲಬ್ಯವಾಗಿಲ್ಲ. ಆತನು ಲಾರಿ ಚಾಲಕನಾಗಿರುವುದರಿಂದ ಲಾರಿಯಲ್ಲಿ ಕಾಲ ಕಳೆಯುತ್ತಿದ್ದ ಎನ್ನಲಾಗಿದೆ. ಕಳೆದ 4ದಿನದ ಹಿಂದೆ ಎಎಸ್‌ಐ ಮಹಾಬಲೇಶ್ವರ ಗಡದ ಮತ್ತು ಎಚ್‌ಸಿ ಮೋಹನ ಗೌಡ ಕೇರಳಕ್ಕೆ ಆಗಮಿಸಿ ಅಲ್ಲಿಯ ಪೊಲೀಸರ ಸಹಾಯದೊಂದಿಗೆ ಆತನ ಚಲನ ವಲನದ ಮಾಹಿತಿ ಪಡೆದು ಆತನ ಉತ್ತರ ಕನ್ನಡಕ್ಕೆ ಲಾರಿ ಚಾಲಕನಾಗಿ ತೆರಳಿದ್ದಾನೆ ಎನ್ನುವು ಬಲ್ಲ ಮೂಲಗಳ ಮಾಹಿತಿಯನ್ನು ಪಿಎಸ್‌ಐ ಸುನೀಲ ಅವರಿಗೆ ರವಾನಿಸಿದ್ದರು. ತಕ್ಷಣವೇ ಡಿವೈಎಸ್ಪಿ ಗಿರೀಶ ವಿ ಮತ್ತು ಪಿಐ ಚಂದ್ರಶೇಖರ ಮಠಪತಿ ಅವರ ಮಾರ್ಗದರ್ಶನಲ್ಲಿ ಕುಮಟಾದ ಹೊಳೆಗದ್ದೆ ಟಾಲ್‌ನಾಕ್ ಬಳಿ ಲಾರಿಯನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಆರೋಪಿಯನ್ನು ಬಂದಿಸಿ, ಅಂಕೋಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧನ ಕಾರ್ಯ ಚರಣೆಯಲ್ಲಿ ಪಿಎಸ್‌ಐ ಸುನೀಲ ಹೊಲ್ಲೊಳ್ಳಿ, ಸಿಬ್ಬಂದಿಗಳಾದ ಶೇಖರ ಸಿದ್ದಿ, ಸುರೇಶ ಬೆಳುಳ್ಳಿ, ಚಾಲಕ ರವಿ ಹಡಪದ ಮತ್ತು ಕುಮಟಾ ಪೊಲೀಸರ ತಂಡವು ಹಾಜರಿದ್ದರು.