ಡೈಲಿ ವಾರ್ತೆ: 22/JAN/2025
ಫ್ಯಾಮಿಲಿ ಪ್ಲ್ಯಾನಿಂಗ್ ಚಿಕಿತ್ಸೆಗೆ ದಾಖಲಾಗಿದ್ದ ಬಾಣಂತಿ ಅಸ್ವಸ್ಥಗೊಂಡು ಸಾವು
ಮಡಿಕೇರಿ: ಎರಡೇ ಮಕ್ಕಳು ಸಾಕು ಇನ್ಮುಂದೆ ಮಕ್ಕಳು ಮಾಡಿಕೊಳ್ಳೋದು ಬೇಡವೆಂದು ಲ್ಯಾಪ್ರೊಸ್ಕೋಪಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರು ಆಪರೇಷನ್ ಥಿಯೆಟರ್‌ಗೆ ಹೋಗಿದ್ದ ವೇಳೆ ತೀವ್ರ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಮೃತಪಟ್ಟ ಬಾಣಂತಿ ಮಹಿಳೆ ಶಾಂತಿ (27) ಎಂದು ಗುರುತಿಸಲಾಗಿದೆ.
ಮೂಲತಃ ಪಿರಿಯಾಪಟ್ಟಣ ತಾಲೂಕಿನ ಬೂದಿತಿಟ್ಟು ಗ್ರಾಮದ ಚೇಳಾದೋರೆ ಎಂಬುವವರ ಪತ್ನಿ ಶಾಂತಿ ಅವರು, ಮಂಗಳವಾರ ತಮ್ಮ ಗಂಡ ಹಾಗೂ 2 ತಿಂಗಳು 10 ದಿನದ ಮಗುವಿನೊಂದಿಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗಮಿಸಿದ್ದಾರೆ. ಲ್ಯಾಪ್ರೊಸ್ಕೋಪಿ (ಉದರ ದರ್ಶಕ) ಎಂಬ ಶಸ್ತ್ರಚಿಕಿತ್ಸೆಯಾಗುತ್ತಿದ್ದ ಹಿನ್ನೆಲೆ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿಸಲು ಮುಂದಾಗಿದ್ದಾರೆ. ಇದೇ ದಿನ ಸುಮಾರು 14 ಬಾಣಂತಿಯರು ಫ್ಯಾಮಿಲಿ ಪ್ಲ್ಯಾನಿಂಗ್‌ಗೆ ನೋಂದಣಿ ಮಾಡಿಕೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಆಪರೇಷನ್ ಮಾಡಿಸಲು ಶಾಂತಿ ಅವರು ಮುಂದಾದ ವೇಳೆ ಅಸ್ವಸ್ಥತೆಯಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ವೈದ್ಯಾಧಿಕಾರಿಗಳು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲು ಮುಂದಾಗಿದ್ದಾರೆ. ಬಾಣಂತಿ ಮಹಿಳೆ ಶಾಂತಿಯನ್ನು ಮಡಿಕೇರಿ ಆಸ್ಪತ್ರೆಗೆ ರವಾನೆ ಮಾಡುವ ಸಂದರ್ಭದಲ್ಲಿ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.ಸದ್ಯ ಮೃತ ಮಹಿಳೆ ಶವವನ್ನ ಮರಣೋತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕೊಡಗು ಎಸ್ಪಿ ರಾಮರಾಜನ್ ಪ್ರತಿಕ್ರಿಯಿಸಿದ್ದಾರೆ. ವೈದ್ಯಾಧಿಕಾರಿ ಸತೀಶ್ ಸಹ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ