ಡೈಲಿ ವಾರ್ತೆ: 24/ಫೆ. /2025

ಮಂಡ್ಯ| ಸಾಲಭಾದೆಯಿಂದ
ಒಂದೇ ಕುಟುಂಬದ ಮೂವರು ವಿಸಿ ನಾಲೆಗೆ ಹಾರಿ ಆತ್ಮಹತ್ಯೆ

ಮಂಡ್ಯ: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ವಿಷ ಸೇವಿಸಿ, ನಂತರ ವಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ದಾರುಣ ಘಟನೆ ಸೋಮವಾರ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಮಾಸ್ತಪ್ಪ, ಅವರ ಪತ್ನಿ ರತ್ನಮ್ಮ ಹಾಗೂ ಮಗಳು ಲಕ್ಷ್ಮೀ ಎಂದು ಗುರುತಿಸಲಾಗಿದ್ದು, ದಂಪತಿಯ ಮೃತದೇಹ ಪತ್ತೆ ಆಗಿದೆ. ಮಗಳ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿದೆ.

ಮೃತರು ಶ್ರೀರಂಗಪಟ್ಟಣದ ಗಂಜಾಂ ನಿವಾಸಿಗಳಾಗಿದ್ದು, ಮಾಸ್ತಪ್ಪ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದರು. ಸುಮಾರು 3 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದ ಮಾಸ್ತಪ್ಪ, ಸಾಲಕೊಟ್ಟವರು ಇಂದು ಮನೆ ಬಳಿ ಗಲಾಟೆ ಮಾಡಿದ್ದಕ್ಕೆ ನೊಂದು, ಕುಟುಂಬದೊಂದಿಗೆ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

3 ಲಕ್ಷ ರೂ. ಕೈಸಾಲ ಸೇರಿದಂತೆ ಸುಮಾರು 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಮಾಸ್ತಪ್ಪ, ಸಾಲಗಾರರ ಕಾಟದಿಂದ ಮನೆ ಮಾರಾಟ ಮಾಡಲೂ ಮುಂದಾಗಿದ್ದರು.

ಶ್ರೀರಂಗಪಟ್ಟಣದ ಗಂಜಾಂನಿಂದ ಆಟೋದಲ್ಲಿ ಮಾಸ್ತಪ್ಪ ಹಾಗೂ ಕುಟುಂಬ, ಚಂದಗಾಲು ಬಳಿ ನಾಲೆ ಏರಿ ಮೇಲೆ ಆಟೋ ನಿಲ್ಲಿಸಿ ಮೊದಲು ದಂಪತಿ ಮತ್ತು ಮಗಳು ವಿಷ ಸೇವಿಸಿದ್ದಾರೆ. ಬಳಿಕ ವಿ.ಸಿ.ನಾಲೆಗೆ ಹಾರಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸದ್ಯ ಘಟನಾ ಸ್ಥಳಕ್ಕೆ ಎಸ್​​ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.