


ಡೈಲಿ ವಾರ್ತೆ: 25/ಫೆ. /2025


ಐಎಂಎ ಹೂಡಿಕೆದಾರರಿಗೆ ರಾಜ್ಯ ಸರ್ಕಾರ ಗುಡ್ನ್ಯೂಸ್: ಕಂಪನಿ ಆಸ್ತಿ ಹರಾಜು, ರಂಜಾನ್ ಹಬ್ಬದೊಳಗೆ ಹಣ ವಾಪಸ್
ಬೆಂಗಳೂರು: ಕಂದಾಯ ಸಚಿವ ಕೃಷ್ಣಬೈರೇಗೌಡ, ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡ ಎಲ್ಲಾ ಠೇವಣಿದಾರರಿಗೆ ಶುಭ ಸುದ್ದಿ ನೀಡಿದ್ದಾರೆ.
ಹಣ ಕಳೆದುಕೊಂಡ ಎಲ್ಲರಿಗೂ ರಂಜಾನ್ ಹಬ್ಬದ ಒಳಗಾಗಿ ಪರಿಹಾರ ನೀಡುವುದಾಗಿ ಅವರು ತಿಳಿಸಿದ್ದಾರೆ. ಐಎಂಎ ಹಗರಣ ಸಂಬಂಧ ಸೋಮವಾರ ವಿಕಾಸಸೌಧದಲ್ಲಿ ಸಭೆ ನಡೆಯಿತು. ಬಳಿಕ ಸಚಿವರು ಪರಿಹಾರ ಕೊಡುವುದರ ಬಗ್ಗೆ ಮಾಹಿತಿ ನೀಡಿದರು.
ಸಚಿವ ಜಮೀರ್ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸಭೆಯಲ್ಲಿ ಭಾಗಿಯಾಗಿದ್ದರು. ಐಎಂಎದಲ್ಲಿ ಎಷ್ಟು ಮೊತ್ತದ ಹಗರಣ ನಡೆದಿದೆ, ಈವರೆಗೆ ಎಷ್ಟು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ, 7 ವರ್ಷದಲ್ಲಿ ಎಷ್ಟು ಜನರಿಗೆ ಹಣ ಹಿಂತಿರುಗಿಸಲಾಗಿದೆ ಎಂಬ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಪರಿಹಾರದ ಬಗ್ಗೆ ಸಚಿವರು ಹೇಳಿದ್ದಿಷ್ಟು
ಐಎಂಎನಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋದವರಿಗೆ, ಹೂಡಿಕೆಯ ಅನುಪಾತದ ಆಧಾರದಲ್ಲಿ ಪರಿಹಾರ ಕೊಡಲಾಗುವುದು. ಫಲಾನುಭವಿಗಳು ಮೃತಪಟ್ಟಿದ್ದರೆ ಅವರ ನಾಮಿನಿಗೆ ಪರಿಹಾರ ನೀಡಲಾಗುವುದು. ರಂಜಾನ್ ಹಬ್ಬಕ್ಕೂ 10 ದಿನ ಮೊದಲೇ ಪರಿಹಾರ ಸಿಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏನಿದು ಐಎಂಎ ಹಗರಣ?
ಹಣ ಡಬ್ಲಿಂಗ್ ಆಸೆಯಿಂದಾಗಿ ಒಂದು ಲಕ್ಷಕ್ಕೂ ಅಧಿಕ ಠೇವಣಿದಾರರು 3,213.58 ಕೋಟಿ ರೂಪಾಯಿಗಳಷ್ಟು ಹಣವನ್ನು ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದರು. ಸದ್ಯ 69 ಸಾವಿರ ಠೇವಣಿದಾರರಿಗೆ ಹಣ ವಾಪಸ್ ನೀಡಬೇಕಿದೆ. ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಸರ್ಕಾರ ಐಎಂಎ ಕಂಪನಿಗೆ ಸಂಬಂಧಿಸಿದ 106.92 ಕೋಟಿ ಮೌಲ್ಯದ ಚರಾಸ್ತಿ, 401.92 ಕೋಟಿ ಮೌಲ್ಯ ಸ್ಥಿರಾಸ್ತಿ ವಶಕ್ಕೆ ಪಡೆದುಕೊಂಡಿತ್ತು.ಅಲ್ಲದೆ ಕಂಪನಿಯ ವಿವಿಧ ಬ್ಯಾಂಕ್ ಖಾತೆಗಳಿಂದ 2.88 ಕೋಟಿ ರೂಪಾಯಿ ನಗದು ಸೇರಿದಂತೆ 534.5 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಕೋರ್ಟ್ನ ಆದೇಶದಂತೆ ಐಎಂಎ ಆಸ್ತಿಗಳನ್ನು ಹರಾಜು ಹಾಕಿ ಈಗ ಸರ್ಕಾರ ಫಲಾನುಭವಿಗಳಿಗೆ ಹಣ ಹಿಂತಿರುಗಿಸಲು ಮುಂದಾಗಿದೆ.
ಸರ್ಕಾರದ ಈ ನಿರ್ಧಾರದಿಂದ, ಲಕ್ಷ ಲಕ್ಷ ರೂಪಾಯಿ ಹಣ ಕಳೆದುಕೊಂಡು ಕಳೆದ 7 ವರ್ಷಗಳಿಂದ ಪರಿಹಾರದ ಹಣಕ್ಕಾಗಿ ಎದುರು ನೋಡುತ್ತಿದ್ದವರಿಗೆ ಹಲವು ವರ್ಷಗಳ ಬಳಿಕ ನ್ಯಾಯ ಸಿಗಲಿದೆ. ಆದರೆ, ಇದರಲ್ಲಿ ಯಾವುದೇ ಲೋಪ ಆಗದಂತೆ ನೋಡಿಕೊಳ್ಳಬೇಕಿದೆ.