


ಡೈಲಿ ವಾರ್ತೆ: 25/ಫೆ. /2025


ಲೈನ್‌ಮ್ಯಾನ್ ನಿರ್ಲಕ್ಷ್ಯದಿಂದ ರೈತ ಮೃತ್ಯು – ಸ್ಥಳೀಯರಿಂದ ಪ್ರತಿಭಟನೆ

ಹಾವೇರಿ: ಲೈನ್‌ಮ್ಯಾನ್ ನಿರ್ಲಕ್ಷ್ಯಕ್ಕೆ ಅಮಾಯಕ ರೈತನೊಬ್ಬ ಬಲಿಯಾಗಿರುವಂತಹ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ತುಮರಿಕೊಪ್ಪ ಬಳಿ ನಡೆದಿದೆ.
ಕುಟುಂಬಕ್ಕೆ ಆಧಾರವಾಗಿದ್ದ ಯುವ ರೈತನನ್ನು ಕಳೆದುಕೊಂಡು ಕುಟುಂಬ ಇದೀಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅಮಾಯಕರ ಜೀವ ತೆಗೆಯುತ್ತಿರುವ ಲೈನ್‌ಮ್ಯಾನ್ ವಜಾಗೊಳಿಸುವಂತೆ ರೈತರು ಬೀದಿಗಿಳಿದು ಹೋರಾಟ ಮಾಡಿದ್ದಾರೆ.
ಪ್ರಾಣದ ಹಂಗು ತೊರೆದು ಮಳೆ, ಚಳಿ ಲೆಕ್ಕಿಸದೇ ವಿದ್ಯುತ್ ಪೂರೈಸುವ ಲೈನ್ಮ್ಯಾನ್ಗಳು ಜನರ ಪಾಲಿಗೆ ದೈವ ಸ್ವರೂಪಿಗಳೇ ಆಗಿದ್ದಾರೆ. ಮಳೆಗಾಲದಲ್ಲಿ ಮರ ಬಿದ್ದು, ತಂತಿ ಹರಿದು ಅನಾಹುತಗಳಾಗುವ ಮೊದಲೇ ಬಂದು ಕಂಬ ಏರಿ ದುರಸ್ತಿ ಮಾಡುವ ಲೈನ್ಮ್ಯಾನ್ಗಳನ್ನು ಸರ್ಕಾರವೇ ಪವರ್ ಮ್ಯಾನ್ ಅಂತ ಗೌರವದಿಂದ ಬಿರುದು ನೀಡಿದೆ. ಆದರೆ ಇಲ್ಲೊಬ್ಬ ಐನಾತಿ ಲೈನ್‌ಮ್ಯಾನ್ ಮಾಡಿದ ನಿರ್ಲಕ್ಷ್ಯಕ್ಕೆ ಮುಗ್ದ ರೈತನೊಬ್ಬ ಜೀವ ಬಿಟ್ಟಿದ್ದಾನೆ.
ವಿದ್ಯುತ್ ಕಂಬ ಏರಲಾರದೇ ರೈತನನ್ನೇ ಕಂಬ ಹತ್ತಿಸಿದ ಪರಿಣಾಮ ರೈತ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ. ಕಾಶಿನಾಥ ಕಮ್ಮಾರ್ ಮೃತ ಯುವ ರೈತ.
ತಿರುಪತಿ ಎಂಬ ಲೈನ್‌ಮ್ಯಾನ್ ತಾನು ವಿದ್ಯುತ್ ಕಂಬ ಏರಿ ದುರಸ್ತಿ ಕೆಲಸ ಮಾಡುವುದನ್ನು ಬಿಟ್ಟು ರೈತ ಕಾಶಿನಾಥಗೆ ಕಂಬ ಹತ್ತಿಸಿ ವಿದ್ಯುತ್ ಕೆಲಸ ಮಾಡಿಸಲು ಮುಂದಾಗಿದ್ದಾನೆ. ಈ ವೇಳೆ ಕರೆಂಟ್ ಶಾಕ್ ತಗುಲಿ ಆಯ ತಪ್ಪಿ ಕಾಶಿನಾಥ ಕೆಳಗೆ ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ನಡುರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ:
ಘಟನೆ ನಡೆಯುತ್ತಿದ್ದಂತೆ ಹೇಳದೇ ಕೇಳದೇ ಲೈನ್‌ಮ್ಯಾನ್ ತಿರುಪತಿ ಪರಾರಿ ಆಗಿದ್ದಾರೆ. ಮೃತ ಕಾಶಿನಾಥ ಹೆತ್ತವರ ರೋಧನವಂತೂ ಮುಗಿಲು ಮುಟ್ಟಿದೆ. ಲೈನ್‌ಮ್ಯಾನ್ ಕಾಶಿನಾಥ ಕೆಲ ವರ್ಷಗಳ ಹಿಂದೆಯೂ ಇದೇ ರೀತಿ ಅಮಾಯಕನೊಬ್ಬನನ್ನು ವಿದ್ಯುತ್ ಕಂಬ ಹತ್ತಿಸಿ ಬಲಿ ಪಡೆದಿದ್ದ ಎನ್ನಲಾಗಿದೆ. ಈ ಹಿಂದೆ ರಾಜೀ ಪಂಚಾಯಿತಿ ಮೂಲಕ ಬಚಾವ್ ಆಗಿದ್ದ ತಿರುಪತಿ ಪುನಃ ಅದೇ ತಪ್ಪು ಮಾಡಿದ್ದಾನೆ. ಯುವ ರೈತ ಕಾಶಿನಾಥ ಸಾವಿನಿಂದ ರೊಚ್ಚಿಗೆದ್ದ ಸ್ಥಳೀಯರು ನಡುರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ಮಾಡಿದ್ದಾರೆ.
ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ರಸ್ತೆ ಮದ್ಯ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ಪರಿಹಾರ ಬೇಕು, ಹೆಸ್ಕಾಂ ಸಿಬ್ಬಂದಿಗೆ ಶಿಕ್ಷೆಯಾಗಬೇಕು. ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಕೆಇಬಿಯಲ್ಲಿ ಕೆಲಸ ಕೊಡಬೇಕು. ಹೆಸ್ಕಾಂ ಸಿಬ್ಬಂದಿಯನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ.
ಈ ಹಿಂದೆಯೂ ಕೂಡ ಹೆಸ್ಕಾಂ ಸಿಬ್ಬಂದಿ ತಿರುಪತಿ ಮೇಲೆ ಇಂತಹ ಎರಡ್ಮೂರು ಪ್ರಕರಣಗಳು ಕೇಳಿಬಂದಿವೆ. ಅಷ್ಟಾದರೂ ಅವನ ಮೇಲೆ ಯಾವುದೇ ಕ್ರಮ ಜರುಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿ ಟು ಹಾನಗಲ್ ರಸ್ತೆ ಬಂದ್ ಮಾಡಿ ರೈತರು ಆಕ್ರೋಶ ಹೊರಹಾಕಿದ್ದಾರೆ.