

ಡೈಲಿ ವಾರ್ತೆ: 25/ಫೆ. /2025


ಹಾಸನ| ಕಾಡಾನೆ ದಾಳಿಗೆ ಯುವಕ ಬಲಿ – ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ

ಹಾಸನ: ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವನ ನಡುವಿನ ಸಂಘರ್ಷ ಮುಂದುವರಿದಿದ್ದು, ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದ ಯುವಕ ಅನಿಲ್ ಎಂಬುವರು ಕಾಡಾನೆ ದಾಳಿಗೆ ಬಲಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ. ಅನಿಲ್ ಅಣ್ಣಾಮಲೈ ಎಸ್ಟೇಟ್ನಿಂದ ಮನೆಗೆ ಹೋಗುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ.
ಕುಟುಂಬಕ್ಕೆ ಸಾಂತ್ವನ: ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸರ್ಕಾರ ನೀಡಿದ ಪರಿಹಾರದ ಹಣವಾದ 15 ಲಕ್ಷ ರೂ.ನ ಚೆಕ್ ಅನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಮೃತರ ತಾಯಿಗೆ ಹಸ್ತಾಂತರ ಮಾಡಿದರು. ಈ ವೇಳೆ “ಹಣ ಪಡೆದುಕೊಂಡು ನಾನೇನು ಮಾಡಲಿ. ಮಗನೇ ಇಲ್ಲವಲ್ಲ” ಎಂದು ಹೆತ್ತಮ್ಮ ಕಣ್ಣೀರಿಟ್ಟರು.
ಆನೆ ಸ್ಥಳಾಂತರಕ್ಕೆ ಒತ್ತಾಯ: ದಿನದಿಂದ ದಿನಕ್ಕೆ ಮಾನವ ಮತ್ತು ಕಾಡಾನೆಗಳ ಸಂಘರ್ಷ ಹೆಚ್ಚಾಗುತ್ತಿದ್ದು, 2025 ಪ್ರಾರಂಭವಾಗಿ 2 ತಿಂಗಳೊಳಗೆ ಕಾಡಾನೆಯಿಂದ ಮೂರು ಮಂದಿ ಮೃತಪಟ್ಟಿದ್ದಾರೆ. ಇನ್ನು ಅನಿಲ್ ಸಾವಿನಿಂದ ಸ್ಥಳೀಯರು ಭಯಭೀತರಾಗಿದ್ದು, ಕೂಡಲೇ ಆನೆಗಳನ್ನು ಸ್ಥಳಾಂತರ ಮಾಡಲು ಒತ್ತಾಯಿಸಿದರು. ಇನ್ನು ಶಾಶ್ವತ ಪರಿಹಾರ ಮಾಡುವುದಾದರೇ, ನಮ್ಮ ಜಮೀನನ್ನು ಸರ್ಕಾರಕ್ಕೆ ಬಿಟ್ಟು ಕೊಡಲು ಸಿದ್ಧರಿದ್ದೇವೆ. ಸರ್ಕಾರ ಕೂಡಲೇ ಸ್ಥಳಾಂತರದ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ತನಕ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಡಳಿತದ ಅಧಿಕಾರಿಗಳು ರಾತ್ರಿಯವರೆಗೆ ಸ್ಥಳೀಯರ ಮನವೊಲಿಸುವಲ್ಲಿ ನಿರತರಾಗಿದ್ದರು.