ಡೈಲಿ ವಾರ್ತೆ: 15/JUNE/2025

ಇರಾನ್​-ಇಸ್ರೇಲ್ ನಡುವೆ ನಿಲ್ಲದ ಸಂಘರ್ಷ: ಕ್ಷಿಪಣಿ ದಾಳಿಯಿಂದ ಹೆಚ್ಚಿದ ಸಾವು-ನೋವು

ಟೆಹ್ರಾನ್​: ಇರಾನ್​ ಮತ್ತು ಇಸ್ರೇಲ್​ ನಡುವಿನ ಸಂಘರ್ಷ ಮೂರನೇ ದಿನಕ್ಕೆ ತಲುಪಿದ್ದು, ಇಂದೂ ಕೂಡ ಉಭಯ ರಾಷ್ಟ್ರಗಳ ನಡುವೆ ಕ್ಷಿಪಣಿ, ಡ್ರೋನ್​ ದಾಳಿ ನಡೆದಿದೆ. ಇದರಿಂದ ಎರಡೂ ದೇಶಗಳಲ್ಲಿ ಸಾವು-ನೋವು ಹೆಚ್ಚಾಗಿದೆ. ಈ ಮಧ್ಯೆ, ‘ಸಂಘರ್ಷದಲ್ಲಿ ನಮ್ಮ ಪಾತ್ರವಿಲ್ಲ’ ಎಂದು ಅಮೆರಿಕ ಹೇಳಿದೆ.

ಇಸ್ರೇಲ್‌ನ ರಕ್ಷಣಾ ಸಚಿವಾಲಯದ ಪ್ರಕಾರ, ಇರಾನ್​ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ನಡೆಸಿದ ದಾಳಿಯಲ್ಲಿ ಕನಿಷ್ಠ 10 ಇಸ್ರೇಲಿಗರು ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 13ಕ್ಕೆ ತಲುಪಿದೆ ಎಂದು ತಿಳಿಸಿದೆ. ಟೆಲ್ ಅವೀವ್ ಬಳಿಯ ವಸತಿ ಸಮುಚ್ಚಯಕ್ಕೆ ಕ್ಷಿಪಣಿ ಅಪ್ಪಳಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. 180 ಜನರು ಗಾಯಗೊಂಡಿದ್ದಾರೆ. 7 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ಕ್ಷಿಪಣಿ ಅಪ್ಪಳಿಸಿದ್ದರಿಂದ ಕಟ್ಟಡ ತೀವ್ರ ಹಾನಿಗೀಡಾಗಿದೆ. ಕಾರುಗಳು, ಇತರ ವಾಹನಗಳು ಛಿದ್ರವಾಗಿವೆ. ಘಟನಾ ಸ್ಥಳದಲ್ಲಿ ಬದುಕುಳಿದವರಿಗಾಗಿ ಶೋಧ ನಡೆಯುತ್ತಿದೆ. ಪ್ರಾಣ ಭೀತಿಯಲ್ಲಿ ಕೆಲವರು ಸಾಮಾನು ಸರಂಜಾಮುಗಳೊಂದಿಗೆ ಪ್ರದೇಶ ತೊರೆಯುತ್ತಿರುವುದು ಕಂಡುಬಂದಿದೆ.
ಇರಾನ್​ನಲ್ಲೂ ಸಿಡಿದ ಕ್ಷಿಪಣಿಗಳು: ಇತ್ತ, ಇರಾನ್​ ಮೇಲೆ ಇಸ್ರೇಲ್​ ತನ್ನ ದಾಳಿಯನ್ನು ನಿಲ್ಲಿಸಿಲ್ಲ. ಭಾನುವಾರ ಮುಂಜಾನೆ ಇರಾನ್​ನ ವಿವಿಧೆಡೆ ಸ್ಫೋಟಗಳು ಸಂಭವಿಸಿದ್ದು ವರದಿಯಾಗಿದೆ. ಮೊದಲ ದಿನದ ದಾಳಿಯಲ್ಲಿ 78 ಜನರು ಸಾವು, 320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದಾದ ಬಳಿಕ ಹೊಸ ಸಾವು- ನೋವುಗಳ ಬಗ್ಗೆ ಇರಾನ್​ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿಲ್ಲ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್​​ಗೆ ಮತ್ತೊಂದು ಎಚ್ಚರಿಕೆ ರವಾನಿಸಿದ್ದಾರೆ. “ಮುಂಬರುವ ದಿನಗಳಲ್ಲಿ ನಮ್ಮ ಪಡೆಗಳು ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಲಿವೆ. ಇರಾನ್​ ಹಿಂದೆಂದೂ ನೋಡಿರದ ಭೀಕರತೆ ಕಾಣಲಿದೆ” ಎಂದು ಖಡಕ್ ವಾರ್ನಿಂಗ್​ ನೀಡಿದ್ದಾರೆ.

ಅಮೆರಿಕದ ಪಾತ್ರವಿಲ್ಲ-ಟ್ರಂಪ್​: ನಮ್ಮ ಮೇಲಿನ ಇಸ್ರೇಲ್​ ದಾಳಿಯಲ್ಲಿ ಅಮೆರಿಕದ ಬೆಂಬಲವಿದೆ ಎಂದು ಇರಾನ್​ ಆರೋಪಿಸಿದೆ. ಅಮೆರಿಕದ ನೆಲೆಗಳ ಮೇಲೆ ಇರಾನ್​ ಸೇನೆ ದಾಳಿ ಮಾಡಲಿದೆ ಎಂದೂ ಎಚ್ಚರಿಕೆ ನೀಡಿದೆ. ಇದಕ್ಕೆ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪ್ರತಿಕ್ರಿಯೆ ನೀಡಿದ್ದಾರೆ. “ಇಸ್ರೇಲ್​- ಇರಾನ್​ ನಡುವಿನ ಸಂಘರ್ಷದಲ್ಲಿ ನಮ್ಮ ಪಾತ್ರವಿಲ್ಲ. ಇಸ್ರೇಲ್​ಗೆ ನಾವು ನೆರವು ನೀಡಿಲ್ಲ” ಎಂದು ಹೇಳಿದ್ದಾರೆ.

“ಇರಾನ್​ ನಮ್ಮ ವಿರುದ್ಧ ಪ್ರತೀಕಾರದ ದಾಳಿ ನಡೆಸಿದಲ್ಲಿ ಅಮೆರಿಕ ಹಿತಾಸಕ್ತಿಗಾಗಿ ನಾವು ಮರು ದಾಳಿ ನಡೆಸಬೇಕಾಗುತ್ತದೆ. ಅದು ಹಿಂದೆಂದಿಗಿಂತಲೂ ಭೀಕರವಾಗಿರಲಿದೆ” ಎಂದು ಟ್ರಂಪ್​ ಎಚ್ಚರಿಕೆ ನೀಡಿದ್ದಾರೆ.

ಪರಮಾಣು ಮಾತುಕತೆ ರದ್ದು: ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಯೋಜಿಸಲಾದ ಮಾತುಕತೆಗಳು ರದ್ದಾಗಿವೆ. ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸುತ್ತಿರುವ ಅರಬ್​​ನ ಕೊಲ್ಲಿ ರಾಷ್ಟ್ರವಾದ ಒಮಾನ್, ಭಾನುವಾರ ನಡೆಯಬೇಕಿದ್ದ ಆರನೇ ಸುತ್ತಿನ ಮಾತುಕತೆ ನಡೆಯುತ್ತಿಲ್ಲ ಎಂದು ಹೇಳಿದೆ.