ಡೈಲಿ ವಾರ್ತೆ: 21/JUNE/2025

ಸಕಲೇಶಪುರ| ಗ್ಯಾಸ್ ಟ್ಯಾಂಕರ್‌ಗೆ KSRTC ಬಸ್ ಡಿಕ್ಕಿ: 15 ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯ

ಹಾಸನ: ಗ್ಯಾಸ್ ಟ್ಯಾಂಕರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅದರಲ್ಲಿ ಹದಿನೈದು ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ನಡೆದಿದೆ.

ಚಿಂತಾಮಣಿ ಡಿಪೋದ ಸಾರಿಗೆ ಬಸ್ ಚಿಕ್ಕಬಳ್ಳಾಪುರದಿಂದ ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಓವರ್‌ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದಿದೆ.

ಗಂಭೀರವಾಗಿ ಗಾಯಗೊಂಡವರನ್ನು ಹಾಸನ ಹಾಗೂ ಮಂಗಳೂರು ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ರವಾನಿಸಲಾಗಿದೆ. ಉಳಿದ ಗಾಯಾಳುಗಳು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.