ಡೈಲಿ ವಾರ್ತೆ: 22/JUNE/2025

ಇರಾನ್-ಇಸ್ರೇಲ್ ಸಂಘರ್ಷ: ಅಖಾಡಕ್ಕೆ ಅಮೆರಿಕಾ ಅಧಿಕೃತ ಎಂಟ್ರಿ; ಇರಾನ್ 3 ಅಣುಸ್ಥಾವರಗಳ ಮೇಲೆ ಏರ್‌ ಸ್ಟ್ರೈಕ್‌..!

ವಾಷಿಂಗ್ಟನ್: ಇಸ್ರೇಲ್-ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಮಹಾತಿರುವು ಪಡೆದುಕೊಂಡಿದ್ದು, ಸಂಘರ್ಷಕ್ಕೆ ವಿಶ್ವದ ದೊಡ್ಣ ಅಮೆರಿಕಾ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ.

ಇರಾನ್ ರಾಷ್ಟ್ರ 3 ಅಣುಸ್ಥಾವರಗಳ ಮೇಲೆ ಅಮೆರಿಕಾ ವೈಮಾನಿಕ ದಾಳಿ ನಡೆಸಿದ್ದು, ಇರಾನ್‌ನಲ್ಲಿರುವ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಈ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಘೋಷಣೆ ಮಾಡಿದ್ದಾರೆ. ಈ ಬೆಳವಣಿಗೆ ಅಣುಯುದ್ಧದ (Nuclear War) ಭೀತಿಯನ್ನು ಹೆಚ್ಚಾಗುವಂತೆ ಮಾಡಿದೆ.

ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ನೆಲೆಗಳ ಮೇಲೆ ಅಮೆರಿಕವು ಅತ್ಯಂತ ಯಶಸ್ವಿಯಾಗಿ ದಾಳಿಗಳನ್ನು ನಡೆಸಿದೆ. ಎಲ್ಲಾ ವಿಮಾನಗಳು ಈಗ ಇರಾನಿನ ವಾಯುಪ್ರದೇಶದಿಂದ ಹೊರಗಿವೆ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕಾದ ಈ ದಾಳಿಯು ಜಾಗತಿಕ ರಾಜಕಾರಣದಲ್ಲಿ ದೊಡ್ಡ ತಲ್ಲಣ ಸೃಷ್ಟಿಸಿದೆ. ಈಗಾಗಲೇ ಇಸ್ರೇಲ್-ಹಮಾಸ್ ಯುದ್ಧ, ಅದರಿಂದ ಶುರುವಾದ ಇಸ್ರೇಲ್-ಇರಾನ್ ಸಂಘರ್ಷ, ಈಗ ಅಮೆರಿಕದ ನೇರ ಪ್ರವೇಶ. ಇದು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುವ ಆತಂಕ ಶುರುವಾಗುವಂತೆ ಮಾಡಿದೆ. ಅಮೆರಿಕಾದ ಈ ದಾಳಿಗೆ ಇರಾನ್ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದೂ ಕೂಡ ಇದೀಗ ಕುತೂಹಲ ಸೃಷ್ಟಿಸಿದೆ.