


ಡೈಲಿ ವಾರ್ತೆ: 01/ಆಗಸ್ಟ್/ 2025


ಬಂಟ್ವಾಳ : ನೇತ್ರಾವತಿ ನದಿಯ ಮಧ್ಯ ಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

ಬಂಟ್ವಾಳ : ಬಜಾಲ್ ಮುಗೇರು ಸಮೀಪ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ.
ಜುಲೈ 27ರಂದು ನಾಪತ್ತೆಯಾಗಿದ್ದ ಕಡೇಶಿವಾಲಯದ ಹೇಮಂತ್ ಆಚಾರ್ಯ (21) ಅವರ ಮೃತದೇಹ ಎಂದು ಗುರುತಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಜುಲೈ 28 ರಂದು ಈತನ ಸ್ಕೂಟರ್ ಹಾಗೂ ಮೊಬೈಲ್ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಬಳಿ ಪತ್ತೆಯಾಗಿತ್ತು. ಹೀಗಾಗಿ ಆತ ನದಿಗೆ ಹಾರಿರಬಹುದು ಎಂಬ ಶಂಕೆಯಿಂದ ಹುಡುಕಾಟ ಆರಂಭಗೊಂಡಿತ್ತು. ಜುಲೈ 31ರಂದು ಹೇಮಂತ್ ಶವವಾಗಿ ಪತ್ತೆಯಾಗಿದ್ದಾರೆ.
ಹೇಮಂತ್ ಆಚಾರ್ಯ ಅವರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಮತ್ತು ನಗರ, ಪೊಲೀಸರು ಜಂಟಿಯಾಗಿ ಅಗ್ನಿಶಾಮಕದಳ ಹಾಗೂ ಸ್ಥಳೀಯ ಈಜುಗಾರರ ಸಹಾಯದಿಂದ ಹುಡುಕಾಟ ಆರಂಭಿಸಿದ್ದರು. ಮೂರು ದಿನಗಳಾದರೂ ಸಿಗದ ಕಾರಣ, ಮುಳುಗುತಜ್ಞ ಈಶ್ವರ ಮಲ್ಪೆ ಮತ್ತು ತಂಡ ಹಾಗೂ
ಎನ್ಡಿಆರ್ಎಫ್ ಗುರುವಾರ ಆಗಮಿಸಿದ ಮೇಲೆ ಶೋಧ ಕಾರ್ಯ ಮತ್ತಷ್ಟು ಬಿರುಸಾಯಿತು. ಜಕ್ರಿಬೆಟ್ಟು ಅಲ್ಲದೆ, ತುಂಬೆ ಸಹಿತ ನದಿಯ ಹರಿವಿನ ಭಾಗಗಳಲ್ಲೆಲ್ಲಾ ಹುಡುಕಾಟ ನಡೆಸಲಾಗಿತ್ತು.
ಎನ್‌ಡಿಆರ್‌ಎಫ್‌ನ ಸುಮಾರು 26 ಮಂದಿ, ಬಂಟ್ವಾಳ ಅಗ್ನಿಶಾಮಕ ಠಾಣಾಧಿಕಾರಿ ಹರೀಶ್ ಕೆ.ಟಿ.ಯ ತಂಡ, ಸ್ಥಳೀಯ ಈಜುಗಾರ ನಿಸಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಗುರುವಾರ ಮಧ್ಯಾಹ್ನದ ಬಳಿಕ ತುಂಬೆ ಡ್ಯಾಂ ನಿಂದ ಕೆಳಭಾಗದಲ್ಲಿ ಮೂರು ತಂಡಗಳ ಜೊತೆಯಲ್ಲಿ ಡ್ರೋನ್ ಬಳಸಿ ಶೋಧ ಕಾರ್ಯ ನಡೆಸಲಾಗಿತ್ತು. ಸಂಜೆ ವೇಳೆ ಡ್ರೋನ್ನ ಕಣ್ಣಿಗೆ ಶವವೊಂದು ತೇಲಾಡುವ ಸ್ಥಿತಿಯಲ್ಲಿ ಕಂಡಿದ್ದು, ನದಿಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದ ತಂಡ ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದೆ.