ಡೈಲಿ ವಾರ್ತೆ: 20/ಆಗಸ್ಟ್/ 2025

ದೆಹಲಿ: ಜನಸ್ಪಂದನ ಕಾರ್ಯಕ್ರಮ ವೇಳೆ ಸಿಎಂ ರೇಖಾ ಗುಪ್ತಾಗೆ ಕಪಾಳಮೋಕ್ಷ, ವ್ಯಕ್ತಿ ಬಂಧನ

ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸದಲ್ಲಿ ಇಂದು ಬುಧವಾರ ಬೆಳಗಿನ ಜಾವ ಜನಸ್ಪಂದನ ಕಾರ್ಯಕ್ರಮ ವೇಳೆ ಕಪಾಳಮೋಕ್ಷ ನಡೆದಿದೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ.

35 ವರ್ಷದ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯವರ ಬಳಿ ಕೆಲವು ದಾಖಲೆಗಳನ್ನು ಹಿಡಿದುಕೊಂಡು ಬಂದಿದ್ದು ಮಾತನಾಡುತ್ತಾ ನೋಡನೋಡುತ್ತಿದ್ದಂತೆ ಕಪಾಳಮೋಕ್ಷ ಮಾಡಿದ್ದಾನೆ. ರೇಖಾ ಗುಪ್ತಾ ಅವರ ಕೂದಲು ಸಹ ಎಳೆದಿದ್ದಾನೆ. ಘಟನೆಯಲ್ಲಿ ಸಿಎಂ ರೇಖಾ ಗುಪ್ತಾಗೆ ಯಾವುದೇ ಗಾಯಗಳಾಗಿಲ್ಲವಾದರೂ, ಅವರಿಗೆ ಆಘಾತವನ್ನುಂಟುಮಾಡಿದೆ.
ಈ ಮಧ್ಯೆ, ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಅವರು ರೇಖಾ ಗುಪ್ತಾ ಅವರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ಅವರು ದಾಳಿಯನ್ನು ಖಂಡಿಸಿದ್ದಾರೆ, ಘಟನೆಯನ್ನು ದುರದೃಷ್ಟಕರ ಎಂದು ಕರೆದಿದ್ದಾರೆ. ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಅವರು, ದೆಹಲಿಯ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಮುಖ್ಯಮಂತ್ರಿ ಸುರಕ್ಷಿತವಾಗಿಲ್ಲದಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯ ವ್ಯಕ್ತಿ ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ವ್ಯಕ್ತಿ ಬಂಧನ:
ಘಟನೆ ಬಗ್ಗೆ ದೆಹಲಿ ಮುಖ್ಯಮಂತ್ರಿ ಕಚೇರಿ ಪ್ರತಿಕ್ರಿಯೆ ನೀಡಿದೆ. ಇಂದು ಜನ ಸುನ್ವೈ ಕಾರ್ಯಕ್ರಮ ವೇಳೆ ಸಿಎಂ ರೇಖಾ ಗುಪ್ತಾ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಆರೋಪಿಯನ್ನು ದೆಹಲಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.