ಡೈಲಿ ವಾರ್ತೆ: 20/ಆಗಸ್ಟ್/ 2025

ಶಿವಮೊಗ್ಗ| ಹಾಲಿನ ವಾಹನ ಹಾಗೂ ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ಶಿವಮೊಗ್ಗ: ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ಬಳಿ, ಆಗಸ್ಟ್ 20ರ ಮುಂಜಾನೆ ನಂದಿನಿ ಹಾಲು ಸಾಗಾಣೆ ಮಾಡುವ ಟಾಟಾ ಏಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ, ಬೈಕ್ ನಲ್ಲಿದ್ದ ಇಬ್ಬರು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಉಡುಪಿ ಮೂಲದ ಆದಿತ್ಯ (22) ಹಾಗೂ ಚಿತ್ರದುರ್ಗ ಜಿಲ್ಲೆ ಹಿರಿಯೂರು ಮೂಲದ ಸಂದೀಪ್ (22) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜ್ ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ.

ಮುಂಜಾನೆ 5.15 ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು. ಅಪಘಾತದ ವೇಳೆ ವಾಹನ ಹಿಂಬದಿಯಿಂದ್ದ ಹಾಲಿನ ಪ್ಯಾಕೆಟ್ ಗಳಿದ್ದ ಕ್ರೇಟ್ ಗಳು ನೆಲಕ್ಕೆ ಬಿದ್ದಿವೆ. ಇದರಿಂದ ರಸ್ತೆ ಮೇಲೆಲ್ಲಾ ಹಾಲು ಚೆಲ್ಲಿದೆ.
ಇವರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.