


ಡೈಲಿ ವಾರ್ತೆ: 20/ಆಗಸ್ಟ್/ 2025


ಎಳನೀರು ಕದ್ದಿದ್ದಾನೆಂದು ಮನಸೋ ಇಚ್ಛೆ ಹಲ್ಲೆ: ವ್ಯಕ್ತಿ ಸಾವು, ಇಬ್ಬರ ಬಂಧನ

ಚಿಕ್ಕಮಗಳೂರು: ತೆಂಗಿನ ತೋಟದಲ್ಲಿ ಎಳನೀರು ಕದ್ದಿದ್ದಾನೆಂದು ಮಾಲೀಕನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ.
ಗೊಲ್ಲರಹಟ್ಟಿ ನಿವಾಸಿ ಕುಮಾರ್(37) ಮೃತ ವ್ಯಕ್ತಿ. ಹಲ್ಲೆ ಮಾಡಿರುವ ಮಧು ಮತ್ತು ಚಂದ್ರಪ್ಪ ವಿರುದ್ಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಿ ಬಂಧಿಸಿದ್ದಾರೆ.
ಘಟನೆ ವಿವರ:
ಕಡೂರು ತಾಲೂಕಿನ ಎಸ್. ಬಿದರೆ ಗ್ರಾಮದ ರಸ್ತೆ ಪಕ್ಕ ಚಂದ್ರಪ್ಪ ಅವರ ತೋಟದಲ್ಲಿದ್ದ ಕುಮಾರ್, ಬಿದ್ದ ಎಳನೀರು ಮುಟ್ಟಿದಕ್ಕೆ ಕಳ್ಳತನ ಆರೋಪ ಹೊರಿಸಿ ಕುಮಾರ್ ಮೇಲೆ ಮಾಲೀಕ ಚಂದ್ರಪ್ಪ ಮತ್ತು ಅಳಿಯ ಮಧು ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಆ ಮೂಲಕ ಅಮಾನವೀಯ ಮೆರೆದಿದ್ದಾರೆ.
ತೋಟದ ಪಕ್ಕದ ಹಳ್ಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕುಮಾರ್ ನನ್ನು ಪೋಷಕರು ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕುಮಾರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಮಧು ಮತ್ತು ಚಂದ್ರಪ್ಪ ನನ್ನು ಸಖರಾಯಪಟ್ಟಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೇಸ್ ಮಾಡಲು ವಿಳಂಬ: ಪೊಲೀಸರ ವಿರುದ್ಧ ಆರೋಪ
ಇನ್ನು ಕೇಸ್ ಮಾಡಲು ವಿಳಂಬ ಆರೋಪಿಸಿ ಸಖರಾಯಪಟ್ಟಣ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ, ಕಠಿಣ ಕ್ರಮಕ್ಕೆ ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಆಗ್ರಹಿಸಿದರು. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಸಿ.ಟಿ ಜಯಕುಮಾರ್ ಭೇಟಿ ನೀಡಿದರು. ಮಾರಣಾಂತಿಕ ಹಲ್ಲೆ ಮಾಡಿರುವ ಬಗ್ಗೆ ದೂರು ನೀಡಿದರೂ ಸಾವನ್ನಪ್ಪಿದ ಬಳಿಕ ಪ್ರಕರಣ ದಾಖಲಿಸಿದ್ದಾರೆ ಆರೋಪ ಮಾಡಿದರು. ಈ ವೇಳೆ ಸಖರಾಯಪಟ್ಟಣ ಠಾಣೆ ಪಿಎಸ್ಐ ಪವನ್ ವಿರುದ್ಧ ತನಿಖೆ ನಡೆಸುವುದಾಗಿ ಎಎಸ್ಪಿ ತಿಳಿಸಿದರು.