



ಡೈಲಿ ವಾರ್ತೆ: 24/ಅ./2025

ಕೆ.ಆರ್.ಪುರಂ ಮನೆಯೊಂದರಲ್ಲಿ ಸ್ಫೋಟ: ಮಹಿಳೆ ಸಾವು, ಮೂವರಿಗೆ ಗಾಯ

ಬೆಂಗಳೂರು: ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರಂನ ತ್ರಿವೇಣಿ ನಗರದಲ್ಲಿ ಸಂಭವಿಸಿದೆ.
ಮನೆಯಲ್ಲಿದ್ದ ಅಕ್ಕಯಮ್ಮ (80) ಮೃತಪಟ್ಟವರು. ಚಂದನಾ (22), ಶೇಖರ್ (52) ಮತ್ತು ಕಿರಣ್ ಕುಮಾರ್ (25) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಕೆ.ಆರ್.ಪುರಂ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಬೆಳಗ್ಗೆ 7:15ರ ಸುಮಾರಿಗೆ ಘಟನೆ ಸಂಭವಿಸಿದ್ದು, ಮನೆ ಸಂಪೂರ್ಣ ಜಖಂ ಆಗಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮೂರ್ನಾಲ್ಕು ಮನೆಗಳಿಗೂ ಹಾನಿಯಾಗಿದ್ದು, ಅಕ್ಕಯ್ಯಮ್ಮ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಫೋಟದಿಂದ ಚಂದನಾ ಎಂಬುವರಿಗೆ ಹೆಚ್ಚಿನ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟ ಸಂಭವಿಸಿರುವಂತೆ ಕಂಡು ಬಂದಿದ್ದು, ಹೆಚ್ಚಿನ ತಪಾಸಣೆಯ ಬಳಿಕ ನಿಖರವಾದ ಮಾಹಿತಿ ಲಭ್ಯವಾಗಲಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಕೆ.ಪರಶುರಾಮ ಮಾಹಿತಿ ನೀಡಿದ್ದಾರೆ.