ಡೈಲಿವಾರ್ತೆ:08/ಏಪ್ರಿಲ್ /2026

ಉಡುಪಿ: ಸರ್ಕಾರಿ ಜಾಗ ಅಕ್ರಮ ಒತ್ತುವರಿದಾರರಿಗೆ ಉಡುಪಿ ತಹಶೀಲ್ದಾರ್ ಸಾಥ್? ಕೆಂಪು ಮಣ್ಣಿನ ಮಾಫಿಯಾ ವಿರುದ್ಧ ಸಿಡಿದೆದ್ದ ಪತ್ರಕರ್ತ! ಲೋಕಾಯುಕ್ತಕ್ಕೆ ದೂರು

​ಉಡುಪಿ: ಜಿಲ್ಲೆಯ ಹೊಸೂರು ಗ್ರಾಮದ ಸರ್ವೆ ನಂಬರ್ 141ರಲ್ಲಿ ನಡೆಯುತ್ತಿರುವ ಸರ್ಕಾರಿ ಭೂಮಿಯ ಅಕ್ರಮ ಒತ್ತುವರಿ ಹಾಗೂ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ಈಗ ಲೋಕಾಯುಕ್ತದ ಮೆಟ್ಟಿಲೇರಲಾಗಿದೆ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸುತ್ತಿದ್ದರೂ, ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

​ಪ್ರಕರಣದ ಹಿನ್ನೆಲೆ:
​ಹೊಸೂರು ಗ್ರಾಮದ ಸ.ನಂ 141ರಲ್ಲಿ ಗಣಪು ಶೇಡ್ತಿ ಎಂಬುವವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ‘ಹೊಸಕಿರಣ ನ್ಯೂಸ್’ ಸಂಪಾದಕ ಕಿರಣ್ ಪೂಜಾರಿ ಅವರು ಹಲವಾರು ಬಾರಿ ಲಿಖಿತ ಹಾಗೂ ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು.

​ಅಧಿಕಾರಿಗಳ ನಾಟಕೀಯ ನಡೆ:
​ದೂರಿನ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸುಮಾರು 8 ರಿಂದ 9 ಬಾರಿ ನೋಟಿಸ್ ನೀಡಿದ್ದರೂ ಕಾಮಗಾರಿ ಮಾತ್ರ ಸ್ಥಗಿತಗೊಂಡಿಲ್ಲ. ಅಚ್ಚರಿಯ ವಿಷಯವೆಂದರೆ, ಮಾನ್ಯ ಉಚ್ಚ ನ್ಯಾಯಾಲಯವು ‘ಯಥಾಸ್ಥಿತಿ’ (Status Quo) ಕಾಪಾಡುವಂತೆ ಆದೇಶಿಸಿದ್ದರೂ ಮತ್ತು 4 ತಿಂಗಳೊಳಗೆ ವರದಿ ಸಲ್ಲಿಸಲು ಸೂಚಿಸಿದ್ದರೂ, ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನೇ ಕಡೆಗಣಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

​’ನಮ್ಮ ಮೇಲೆ ಲೋಕಾಯುಕ್ತಕ್ಕೆ ದೂರು ಕೊಡಿ’ ಎಂದ ತಹಶೀಲ್ದಾರ್!
​ಒತ್ತುವರಿ ಬಗ್ಗೆ ಪತ್ರಕರ್ತರು ವಿವರ ಕೇಳಿದರೆ, ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಸೇರಿದಂತೆ ಇತರೆ ಅಧಿಕಾರಿಗಳು ಅತ್ಯಂತ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ.
​”ನಮಗೆ ರಾಜಕೀಯ ಒತ್ತಡವಿದೆ, ನಾವು ಏನೂ ಮಾಡಲು ಸಾಧ್ಯವಿಲ್ಲ. ಬೇಕಿದ್ದರೆ ನಮ್ಮ ಮೇಲೆಯೇ ಲೋಕಾಯುಕ್ತಕ್ಕೆ ದೂರು ನೀಡಿ ಅಥವಾ ನೀವೇ ಹೈಕೋರ್ಟ್‌ನಲ್ಲಿ ಪಿಎಲ್‌ಒ ಹಾಕಿ” ​ಎಂದು ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

​ಕೆಂಪು ಮಣ್ಣಿನ ಅಕ್ರಮ ಸಾಗಾಟ:
​ದಿನಾಂಕ 31-03-2026 ರಂದು ಇದೇ ಸರ್ಕಾರಿ ಜಾಗದಿಂದ ಯಾವುದೇ ಅನುಮತಿ ಇಲ್ಲದೆ ಕೆಂಪು ಮಣ್ಣನ್ನು ಸಾಗಾಟ ಮಾಡಲಾಗಿದೆ. ಈ ಬಗ್ಗೆ ವಿ.ಎ (V.A), ಆರ್.ಐ (R.I) ಹಾಗೂ ತಹಶೀಲ್ದಾರರ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ. ಖಾಲಿ ಜಾಗದಲ್ಲಿ ಶುರುವಾದ ಅಕ್ರಮ ಕಟ್ಟಡ ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದರೂ, ಕಂದಾಯ ಇಲಾಖೆ ಕಣ್ಣುಮುಚ್ಚಿ ಕುಳಿತಿರುವುದು ಅಧಿಕಾರಿಗಳು ಮತ್ತು ಒತ್ತುವರಿದಾರರ ನಡುವಿನ ಒಳಸಂಚನ್ನು ಎತ್ತಿ ತೋರಿಸುತ್ತಿದೆ.

​ಲೋಕಾಯುಕ್ತಕ್ಕೆ ದೂರು:
​ಸರ್ಕಾರಿ ಸ್ವತ್ತನ್ನು ರಕ್ಷಿಸುವಲ್ಲಿ ವಿಫಲರಾದ ಮತ್ತು ಕರ್ತವ್ಯ ಲೋಪ ಎಸಗಿದ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಹಾಗೂ ತಹಶೀಲ್ದಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಿರಣ್ ಪೂಜಾರಿ ಅವರು ಉಡುಪಿಯ ಮಾನ್ಯ ಉಪಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.