


ಡೈಲಿವಾರ್ತೆ:08/ಏಪ್ರಿಲ್ /2026

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ರಾಕೆಟ್ ದಾಳಿಗೆ ಇಬ್ಬರು ಕಂದಮ್ಮಗಳ ಬಲಿ, 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಇಂಫಾಲ್: ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರದ ಕಿಡಿ ಹೊತ್ತಿಕೊಂಡಿದೆ. ಶಂಕಿತ ಉಗ್ರಗಾಮಿಗಳು ನಡೆಸಿದ ರಾಕೆಟ್ ದಾಳಿಗೆ ಇಬ್ಬರು ಅಮಾಯಕ ಮಕ್ಕಳು ಬಲಿಯಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಇಂಫಾಲ್ ಸೇರಿದಂತೆ ಐದು ಪ್ರಮುಖ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಿದೆ.
ಘಟನೆಯ ವಿವರ:
ಬುಧವಾರ ಬೆಳಗಿನ ಜಾವ ಸುಮಾರು 1 ಗಂಟೆ ಹೊತ್ತಿಗೆ ಬಿಷ್ಣುಪುರ ಜಿಲ್ಲೆಯ ಮೂರಾಂಗ್ ಟ್ರಂಗ್ಲೌಬಿ ಎಂಬಲ್ಲಿ ಈ ಭೀಕರ ಘಟನೆ ಸಂಭವಿಸಿದೆ. ಶಂಕಿತ ಉಗ್ರರು ಎಸೆದ ಬಾಂಬ್ ನೇರವಾಗಿ ಮನೆಯೊಂದಕ್ಕೆ ಅಪ್ಪಳಿಸಿದೆ. ಈ ವೇಳೆ ಮನೆಯಲ್ಲಿ ತಾಯಿಯೊಂದಿಗೆ ನಿದ್ರಿಸುತ್ತಿದ್ದ 5 ವರ್ಷದ ಬಾಲಕ ಹಾಗೂ 6 ತಿಂಗಳ ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಘಟನೆಯನ್ನು ಖಂಡಿಸಿ ಭಾರಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು, ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಎರಡು ತೈಲ ಟ್ಯಾಂಕರ್‌ಗಳು ಹಾಗೂ ಒಂದು ಟ್ರಕ್‌ಗೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ, ಮೂರಾಂಗ್ ಪೊಲೀಸ್ ಠಾಣೆಯ ಮುಂದೆ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದು, ತಾತ್ಕಾಲಿಕ ಪೊಲೀಸ್ ಚೌಕಿಗೂ ಹಾನಿ ಉಂಟುಮಾಡಿದ್ದಾರೆ.
5 ಜಿಲ್ಲೆಗಳಲ್ಲಿ ಇಂಟರ್ನೆಟ್ ಬಂದ್:
ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಮಣಿಪುರ ಸರ್ಕಾರವು ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್, ಕಾಕ್ಚಿಂಗ್, ಬಿಷ್ಣುಪುರ ಈ ಜಿಲ್ಲೆಗಳಲ್ಲಿ ಮೊಬೈಲ್ ಡೇಟಾ ಮತ್ತು ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಿದೆ.
ಮುಖ್ಯಮಂತ್ರಿಗಳ ಪ್ರತಿಕ್ರಿಯೆ:
ಈ ಘಟನೆಯನ್ನು ಅನಾಗರಿಕ ಕೃತ್ಯ ಎಂದು ಕರೆದಿರುವ ಮುಖ್ಯಮಂತ್ರಿ ವೈ. ಖೇಮ್‌ಚಂದ್ ಸಿಂಗ್ ಅವರು, ಇದು ಮಾನವೀಯತೆಯ ಮೇಲಿನ ದಾಳಿ. ರಾಜ್ಯದಲ್ಲಿ ಕಷ್ಟಪಟ್ಟು ನೆಲೆಸಿದ್ದ ಶಾಂತಿಯನ್ನು ಕದಡುವ ಯತ್ನ ಇದಾಗಿದೆ. ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಸಾರ್ವಜನಿಕರು ಶಾಂತಿ ಕಾಪಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಹಿನ್ನೆಲೆ: 2023 ಮತ್ತು 2024ರಲ್ಲಿ ನಡೆದ ಜನಾಂಗೀಯ ಸಂಘರ್ಷದ ವೇಳೆ ಮೊಯಿರಾಂಗ್ ಟ್ರೋಂಗ್ಲೌಬಿ ಪ್ರದೇಶವು ಅತೀ ಹೆಚ್ಚು ಗುಂಡಿನ ದಾಳಿಗೆ ಸಾಕ್ಷಿಯಾಗಿತ್ತು. ಕಳೆದ ಮಂಗಳವಾರವಷ್ಟೇ ಈ ಪ್ರದೇಶದಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂಬುದು ಗಮನಾರ್ಹ.
ಪ್ರಸ್ತುತ ಅಹಿತಕರ ಘಟನೆ ನಡೆಯದಂತೆ ತಡೆಯಲು ಇಡೀ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.