ಡೈಲಿವಾರ್ತೆ:13/ಏಪ್ರಿಲ್ /2026

ಶಿವಮೊಗ್ಗದಲ್ಲಿ ಖಾಸಗಿ ಬಸ್ ಪಲ್ಟಿ – ಹಲವು ಪ್ರಯಾಣಿಕರಿಗೆ ಗಂಭೀರ ಗಾಯ

ಶಿವಮೊಗ್ಗ, ಏಪ್ರಿಲ್ 13: ಎದುರಿಗೆ ಬಂದ ಬೈಕ್‌ನ್ನು ತಪ್ಪಿಸಲು ಯತ್ನಿಸಿದ ಖಾಸಗಿ ಬಸ್‌ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಕುಮದ್ವತಿ ಕಾಲೇಜು ಮುಂಭಾಗ ಇಂದು ನಡೆದಿದೆ.

ಅಪಘಾತದಲ್ಲಿ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣವೇ ರಕ್ಷಣೆ ಕಾರ್ಯಾಚರಣೆ ನಡೆಸಿದ್ದಾರೆ.
ಗಾಯಾಳುಗಳನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರ ಸ್ಥಿತಿ ಆತಂಕಕಾರಿ ಎಂದು ತಿಳಿದುಬಂದಿದೆ. ಬಸ್‌ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವುದರಿಂದ ವಾಹನವು ಭಾರೀ ಹಾನಿಗೊಳಗಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ರಸ್ತೆಯ ಹಂಪ್‌ ಬಳಿ ಎದುರಿಗೆ ಬಂದ ಬೈಕ್‌ನ್ನು ತಪ್ಪಿಸಲು ಬಸ್‌ ಚಾಲಕ ಯತ್ನಿಸಿದ್ದಾನೆ. ಈ ವೇಳೆ ಬೈಕ್‌ ಸವಾರ ಎಡ ಹಾಗೂ ಬಲ ದಿಕ್ಕುಗಳಲ್ಲಿ ಅಚಾನಕ್ ಚಲಿಸಿದ್ದರಿಂದ ಚಾಲಕನಿಗೆ ನಿಯಂತ್ರಣ ಕಷ್ಟವಾಗಿ, ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಘಟನೆಯ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.