



ಡೈಲಿವಾರ್ತೆ:17/ಏಪ್ರಿಲ್ /2026

ಯೋಗೇಶ್ ಗೌಡ ಹತ್ಯೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಸೇರಿ 16 ದೋಷಿಗಳಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗಿದ್ದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಮಂದಿ ಅಪರಾಧಿಗಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. 16 ಮಂದಿಗೆ ಕಠಿಣ ಕಾರಾಗೃಹ ಶಿಕ್ಷೆಯ ಜೊತೆಗೆ, ಪ್ರಕರಣದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಚನ್ನಕೇಶವ ಟಿಂಕರಿಕರ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ವಿನಯ್ ಕುಲಕರ್ಣಿ ಸೇರಿದಂತೆ 16 ಪ್ರಮುಖ ಆರೋಪಿಗಳಿಗೆ ಜೀವಿತಾವಧಿ ಜೈಲು.
ಪೊಲೀಸ್ ಅಧಿಕಾರಿಗೆ ಶಿಕ್ಷೆ: ಸಾಕ್ಷ್ಯ ನಾಶ ಮತ್ತು ಭ್ರಷ್ಟಾಚಾರದ ಆರೋಪದಡಿ ಇನ್‌ಸ್ಪೆಕ್ಟರ್ ಟಿಂಕರಿಕರ್‌ಗೆ 7 ವರ್ಷ ಜೈಲು.
ಪರಿಹಾರ: ಮೃತ ಯೋಗೇಶ್ ಗೌಡ ಅವರ ಕುಟುಂಬಕ್ಕೆ (ಮಕ್ಕಳಿಗೆ) 16 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ಪ್ರಕರಣದ ಆರೋಪಿ ಬಸವರಾಜ್ ಮುತ್ತಗಿ ಸಲ್ಲಿಸಿದ್ದ ಮಾಫಿ ಸಾಕ್ಷಿ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಹತ್ತು ವರ್ಷಗಳ ಸುದೀರ್ಘ ಹೋರಾಟ
2016ರಲ್ಲಿ ಧಾರವಾಡದ ಜಿಮ್‌ನಲ್ಲಿ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ತನಿಖೆಯನ್ನು ಸಿಬಿಐ (CBI) ಗೆ ಒಪ್ಪಿಸಿತ್ತು. ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಹತ್ಯೆ, ಕ್ರಿಮಿನಲ್ ಸಂಚು, ಸಾಕ್ಷ್ಯ ನಾಶ ಹಾಗೂ ಅಕ್ರಮ ಕೂಟದಂತಹ ಗಂಭೀರ ಸೆಕ್ಷನ್‌ಗಳನ್ನು ದಾಖಲಿಸಲಾಗಿತ್ತು.
ಕೋರ್ಟ್‌ನಲ್ಲಿ ನಡೆದ ವಾದ-ಪ್ರತಿವಾದ
ವಿಚಾರಣೆ ವೇಳೆ ಸಿಬಿಐ ಪರ ವಕೀಲರು (ASG), “ಇದೊಂದು ವ್ಯವಸ್ಥಿತವಾಗಿ ನಡೆದ ಸಂಚು. ರಾಜಕೀಯ ದ್ವೇಷದಿಂದ ಯುವ ರಾಜಕಾರಣಿಯನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳು ತಮ್ಮ ಅಧಿಕಾರ ಮತ್ತು ಹಣಬಲ ಬಳಸಿ ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸಿದ್ದಾರೆ. ಸಮಾಜಕ್ಕೆ ಇದೊಂದು ಎಚ್ಚರಿಕೆಯಾಗಬೇಕು, ಹಾಗಾಗಿ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಪ್ರಬಲವಾಗಿ ವಾದಿಸಿದ್ದರು.
ಮತ್ತೊಂದೆಡೆ, ಅಪರಾಧಿಗಳ ಪರ ವಕೀಲರು ಕನಿಷ್ಠ ಶಿಕ್ಷೆಗೆ ಮನವಿ ಮಾಡಿದ್ದರು. ಅಪರಾಧಿಗಳಿಗೆ ಸಣ್ಣ ವಯಸ್ಸಿನ ಮಕ್ಕಳಿದ್ದಾರೆ ಎಂಬ ಮಾನವೀಯ ಅಂಶವನ್ನು ಪರಿಗಣಿಸುವಂತೆ ಕೋರಿದ್ದರು. ಆದರೆ, ಅಪರಾಧದ ಸ್ವರೂಪ ಮತ್ತು ಕೃತ್ಯದ ಭೀಕರತೆಯನ್ನು ಗಮನಿಸಿದ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ಖಾಯಂ ಮಾಡಿದೆ.
ಹಿನ್ನೆಲೆ
ಈ ಪ್ರಕರಣದಲ್ಲಿ ಒಟ್ಟು 21 ಮಂದಿ ಆರೋಪಿಗಳ ಪೈಕಿ ಸೋಮಶೇಖರ್ ನ್ಯಾಮಗೌಡ ಹಾಗೂ ವಾಸುದೇವ್ ನಿಲೇಕಣಿ ಎಂಬುವವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಈಗಾಗಲೇ ಖುಲಾಸೆಗೊಳಿಸಲಾಗಿದೆ. ಉಳಿದ 17 ಮಂದಿಯನ್ನು ಸಿಬಿಐ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಯ ನಂತರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.