



ಡೈಲಿವಾರ್ತೆ:17/ಏಪ್ರಿಲ್ /2026

ಪೊಳಲಿ ದೇವಸ್ಥಾನಕ್ಕೆ ತೆರಳಿದ ವಿದ್ಯಾರ್ಥಿನಿ ನಾಪತ್ತೆ: ಹುಡುಕಾಟ ತೀವ್ರ

ಮಂಗಳೂರು, ಏಪ್ರಿಲ್ 17: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಅಡ್ಕ ನಿವಾಸಿಯಾದ 16 ವರ್ಷದ ಬಾಲಕಿಯೊಬ್ಬಳು ಕಳೆದ ಏಪ್ರಿಲ್ 12ರಿಂದ ನಾಪತ್ತೆಯಾಗಿರುವ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ.
ನಾಪತ್ತೆಯಾದ ಬಾಲಕಿಯನ್ನು ಜಗದೀಶ್ ಪೂಜಾರಿ ಹಾಗೂ ಗುಲಾಬಿ ದಂಪತಿಯ ಪುತ್ರಿ ಚೈತನ್ಯ ಎಂದು ಗುರುತಿಸಲಾಗಿದೆ. ಹರೇಕಳದ ರಾಮಕೃಷ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ, ಇತ್ತೀಚೆಗೆ ಪರೀಕ್ಷೆ ಮುಗಿಸಿ ಮನೆಯಲ್ಲೇ ಇದ್ದಳು.
ಪೋಷಕರ ಮಾಹಿತಿ ಪ್ರಕಾರ, ಏಪ್ರಿಲ್ 12ರಂದು ಬೆಳಿಗ್ಗೆ ಸುಮಾರು 7:30ಕ್ಕೆ ಸ್ನೇಹಿತರೊಂದಿಗೆ ಪೊಳಲಿ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದಳು. ಆದರೆ, ದಿನವಿಡೀ ಕಾದರೂ ಮನೆಗೆ ಮರಳದೆ ಕಾಣೆಯಾಗಿರುವುದು ಕುಟುಂಬದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಲ್ಲಿ ನಡೆಸಿದ ಹುಡುಕಾಟ ಫಲಕಾರಿಯಾಗದ ಹಿನ್ನೆಲೆಯಲ್ಲಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಕುರಿತು ಕೊಣಾಜೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 137(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅಪ್ರಾಪ್ತೆಯ ಪತ್ತೆಗೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಬಾಲಕಿಯ ವಿವರಗಳು:
ಹೆಸರು: ಚೈತನ್ಯ
ವಯಸ್ಸು: 16 ವರ್ಷ
ಎತ್ತರ: 5 ಅಡಿ
ದೇಹದ ವಿನ್ಯಾಸ: ದಪ್ಪ ಶರೀರ, ಗೋಧಿ ಮೈಬಣ್ಣ
ಧರಿಸಿದ್ದ ಉಡುಪು: ನೇರಳೆ ಬಣ್ಣದ ಗೌನ್ ಮತ್ತು ಕಪ್ಪು ಕೋಟ್
ಭಾಷೆಗಳು: ಕನ್ನಡ, ತುಳು
ಬಾಲಕಿಯ ಕುರಿತು ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ತಕ್ಷಣ ಮಂಗಳೂರು ನಗರ ನಿಯಂತ್ರಣ ಕೊಠಡಿ (0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (0824-2220536, 9480802350) ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.