


ಡೈಲಿವಾರ್ತೆ:08/ಏಪ್ರಿಲ್ /2026

ಅರಬೈಲ್ ಘಟ್ಟದಲ್ಲಿ ಭೀಕರ ಕಾರು ದುರಂತ: ಬೆಂಕಿಗಾಹುತಿಯಾದ ಕಾರಿನಲ್ಲಿ ಚಾಲಕ ಸುಟ್ಟು ಕರಕಲು – ಹತ್ಯೆ ಶಂಕೆ

ಕಾರವಾರ: ಹುಬ್ಬಳ್ಳಿ ಕಡೆಯಿಂದ ಅಂಕೋಲದತ್ತ ತೆರಳುತ್ತಿದ್ದ ಕಾರೊಂದು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಅಪಘಾತದ ಪರಿಣಾಮ ಕಾರಿನೊಳಗಿದ್ದ ಚಾಲಕ ಸುಟ್ಟು ಕರಕಲಾಗಿದ್ದು, ಮೃತನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಬೆಂಕಿಯ ತೀವ್ರತೆಯಿಂದ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ವಾಹನವು ವೋಕ್ಸ್ ವ್ಯಾಗನ್ ಕಂಪನಿಗೆ ಸೇರಿದ ಕಾರು ಎಂದು ತಿಳಿದುಬಂದಿದೆ.
ಇನ್ನೂ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕಾರಿನೊಳಗೆ ಹತ್ಯೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಕೋಣಗಳಿಂದ ತನಿಖೆ ಕೈಗೊಂಡಿದ್ದು, ಚಾಲಕನ ಗುರುತು ಪತ್ತೆ ಹಾಗೂ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ಹೆಚ್ಚಿನ ಪರಿಶೀಲನೆ ಮುಂದುವರೆದಿದೆ.
ಸ್ಥಳೀಯರ ಸಹಾಯದಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಘಟನೆ ಸಂಬಂಧ ಹೆಚ್ಚಿನ ವಿವರಗಳು ತನಿಖೆಯ ಬಳಿಕವೇ ಬಹಿರಂಗವಾಗಲಿವೆ.